BengaluruCinemaCrime

ಪುನೀತ್‌ ಅಭಿಮಾನಿಗಳ ಕ್ಷಮೆ ಕೋರಿದ ಚಕ್ರವರ್ತಿ ಸೂಲಿಬೆಲೆ

ಬೆಂಗಳೂರು; ಪ್ರವೀಣ್‌ ಕೊಲೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಟೀಕಿಸಲು ಹೋಗಿ, ಪುನೀತ್‌ ರಾಜ್‌ಕುಮಾರ್‌ ಅವರ ಸಾವಿನ ಸಂದರ್ಭವನ್ನು ಪ್ರಸ್ತಾಪಿಸಿದ್ದ ಚಕ್ರವರ್ತಿ ಸೂಲಿಬೆಲೆ ಇದೀಗ ಪುನೀತ್‌ ರಾಜ್‌ ಕುಮಾರ್‌ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ. ಪ್ರವೀಣ್‌ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಸರ್ಕಾರ ಎಡವುತ್ತಿದೆ. ಹಿಂದೂ ಕಾರ್ಯಕರ್ತರ ರಕ್ಷಣೆ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ ಒಂದನ್ನು ಮಾಡಿದ್ದರು. ಅದರ ವಿವರ ಈ ರೀತಿ ಇತ್ತು.

ʻತಮ್ಮದೇ ಪಕ್ಷದ ಶಾಸಕರ ಫೈಲ್ಸ್ ಗೆ ಸಹಿ ಮಾಡಲು ಮುಖ್ಯಮಂತ್ರಿಗಳಿಗೆ ಸಮಯದ ಅಭಾವಿದೆ ಎಂದು ಪಕ್ಷದವರೇ ಟೀಕಿಸಿದ್ದಾರೆ. ಆದರೆ, ಮುಖ್ಯಮಂತ್ರಿಗಳಿಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಮಯವಿದೆ. ಪ್ರಿಮಿಯರ್ ಶೋ ಅಟೆಂಡ್ ಮಾಡಿ, ಸಿನಿಮಾ ನೋಡಿ ಕಣ್ಣೀರು ಹಾಕಲು ಸಮಯವಿದೆ. ನಟರೊಬ್ಬರು ನಿಧನರಾದಾಗ ಮೂರು ದಿನಗಳ ಕಾಲ ಸಮಯ ಕೊಟ್ಟಿದ್ದಾರೆ. ಮುಂದೆ ವಿಕ್ರಾಂತ್ ರೋಣ ಸಿನಿಮಾವನ್ನೂ ಅವರು ನೋಡಲಿದ್ದಾರೆʼ ಎಂದು ಚಕ್ರವರ್ತಿ ಸೂಲಿಬೆಲೆ ಲೇವಡಿ ಮಾಡಿ ಟ್ವೀಟ್‌ ಮಾಡಿದ್ದರು. ಸಿಎಂ ಅವರನ್ನು ಟೀಕಿಸುವ ಭರದಲ್ಲಿ ಪುನೀತ್‌ ಅವರನ್ನು ಅಣಕಿಸಲಾಗಿದೆ ಎಂದು ಪುನೀತ್‌ ಅಭಿಮಾನಿಗಳ ಗರಂ ಆಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪುನೀತ್‌ ಅಭಿಮಾನಿಗಳ ಕ್ಷಮೆ ಕೋರಿ ಚಕ್ರವರ್ತಿ ಸೂಲಿಬೆಲೆ ಟ್ವೀಟ್‌ ಮಾಡಿದ್ದಾರೆ.

   ಈ ಟ್ವೀಟ್ ಪುನೀತ್ ಅವರನ್ನು ಅಗೌರವಿಸಿದ್ದು ಎಂದು ಅನೇಕರು ಭಾವಿಸಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಯವಿಟ್ಟು ಈ ಟ್ವೀಟನ್ನು ಅನ್ಯಥಾ ಭಾವಿಸಬೇಡಿ. ಅಭಿಮಾನಿಗಳಿಗೆ ನೋವಾಗಿದ್ದರೆ ನಿಸ್ಸಂಶಯವಾಗಿ ಕ್ಷಮೆ ಯಾಚಿಸುತ್ತೇನೆ. ಪುನೀತ್ ಅವರ ಅಭಿಮಾನಿಯಾಗಿ ಇದು ನನ್ನ ಕರ್ತವ್ಯವೂ ಹೌದು ಎಂದು ಟ್ವೀಟ್‌ ಮಾಡಿದ್ದಾರೆ.

Share Post