Bengaluru

ಫೆ.14ರಂದು ವಿಧಾನಮಂಡಲ ಜಂಟಿ ಅಧಿವೇಶನ: ಮೊದಲ ದಿನ ರಾಜ್ಯಪಾಲರ ಭಾಷಣ

ಬೆಂಗಳೂರು: ರಾಜ್ಯದ 15 ನೇ ವಿಧಾನಸಭೆಯ 12 ನೇ ಅಧಿವೇಶನವು  ಫೆಬ್ರವರಿ 14 ರಿಂದ 25 ರವರೆಗೆ ನಡೆಯಲಿದೆ. ಸಂಪ್ರದಾಯದಂತೆ ವರ್ಷದ ಈ ಮೊದಲ ಅಧಿವೇಶನದ ಸಂದರ್ಭದಲ್ಲಿ ಫೆಬ್ರವರಿ 14 ರಂದು ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಭಾಷಣದ ನಂತರ ಮತ್ತೆ ಸದನವು ಸಮಾವೇಶಗೊಂಡು ಕಳೆದ ಅಧಿವೇಶನದ ನಂತರ ಹಾಗೂ ಪ್ರಸಕ್ತ ಅಧಿವೇಶನದ ಅವಧಿಯಲ್ಲಿ ಮೃತರಾದ ಸದನದ ಸದಸ್ಯರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಮರುದಿನದಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಸರ್ಕಾರದ ಉತ್ತರ ಮತ್ತು  ವಂದನಾ ನಿರ್ಣಯದ ಅಂಗೀಕಾರ, ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆಗಳು, ಶೂನ್ಯವೇಳೆ, ನಿಲುವಳಿ ಸೂಚನೆಗಳು, ನಿಯಮ 69ರ ಮೇಲಿನ ಸೂಚನೆಗಳು, ಖಾಸಗಿ ಸದಸ್ಯರ ಕಾರ್ಯಕಲಾಪಗಳನ್ನು ಹಾಗೂ ಇತರೆ ಪ್ರಾಮುಖ್ಯ ವಿಷಯಗಳ ಚರ್ಚೆಗೆ ಎಂದಿನಂತೆ ಅವಕಾಶವಿರುತ್ತದೆ ಎಂದು ಅವರು ಹೇಳಿದರು.

ರಾಜ್ಯ ವಿಧಾನ ಸಭೆಯಲ್ಲಿ ಈ ದಿನದ ವರೆಗೆ 2062 ಪ್ರಶ್ನೆಗಳು ಸ್ವೀಕಾರವಾಗಿವೆ. ಅಲ್ಲದೆ, 81 ಗಮನಸೆಳೆಯುವ ಸೂಚನೆಗಳು ಹಾಗೂ ನಿಯಮ 351 ಅಡಿಯಲ್ಲಿ 31 ಸೂಚನೆಗಳು ಸ್ವೀಕೃತವಾಗಿವೆ.
ಸದನದ ಕಲಾಪದಲ್ಲಿ ಪಾಲ್ಗೊಳ್ಳುವ ಮುಖ್ಯಮಂತ್ರಿಯವನ್ನೊಳಗೊಂಡಂತೆ ಎಲ್ಲಾ ಸಚಿವರು ಹಾಗೂ ಪ್ರತಿಪಕ್ಷದ ಎಲ್ಲಾ ಮುಖಂಡರೂ ಸೇರಿದಂತೆ ಎಲ್ಲಾ ಸದಸ್ಯರೂ ಮುಖಗವಸು ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದೂ ಸೇರಿದಂತೆ ಕೋವಿಡ್ ಶಿಷ್ಠಾಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಾರ್ವಜನಿಕ ಸ್ವಾಸ್ಥ್ಯ ಕಾಪಾಡುವ ದೃಷ್ಠಿಯಿಂದ  ಈ ನಿಯಮಗಳು ಆಡಳಿತ ಯಂತ್ರಕ್ಕೆ ನೆರವು ಒದಗಿಸುವ ಅಧಿಕಾರಿ ಮತ್ತು ಸಿಬ್ಬಂದಿಗೂ ಹಾಗೂ ಸದನ ಕಲಾಪ ವರದಿ ಮಾಡಲು ಆಗಮಿಸುವ ಮಾಧ್ಯಮದವರಿಗೂ ಅನ್ವಯಿಸುತ್ತದೆ ಎಂದು ಕಾಗೇರಿ ಅವರು ತಿಳಿಸಿದರು.

Share Post