ಚುನಾವಣಾ ವ್ಯವಸ್ಥೆ ಸುಧಾರಣೆ ; ಸದನದಲ್ಲಿ ಚರ್ಚೆ
ಬೆಂಗಳೂರು: ಪ್ರಜಾಪ್ರಭುತ್ವದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಚುನಾವಣಾ ವ್ಯವಸ್ಥೆಯ ಸುಧಾರಣೆಗಳ ಕುರಿತು ಸದನ ಕಾರ್ಯಕಲಾಪ ಸಮಿತಿಯಲ್ಲಿ ಚರ್ಚಿಸಿ, ಈ ವಿಷಯ ಕುರಿತು ಸದನದಲ್ಲಿ ವಿಸ್ತೃತ ಚರ್ಚೆಗೆ ಕಾಲಾವಕಾಶ ಮಾಡಿಕೊಡಲು ಸೂಕ್ತ ದಿನಾಂಕ ಮತ್ತು ಸಮಯವನ್ನು ನಿಷ್ಕರ್ಶೆ ಮಾಡಲಾಗುವುದು ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹುದೇ ವಿಷಯಗಳ ಮೇಲೆ ಈ ಹಿಂದೆ ನಡೆದ ಚರ್ಚೆಗಳು ಫಲಪ್ರದವಾಗಿಲ್ಲ. ಆದಕಾರಣ, ಇಂತಹ ಚರ್ಚೆಗಳು ಸಾರ್ವಜನಿಕ ಸಮಯವನ್ನು ಕಬಳಿಸುತ್ತದೆ. ಅಲ್ಲವೇ ? ಎಂದು ಪತ್ರಕರ್ತರೋರ್ವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದರು. ಭಾರತಕ್ಕೆ ಒಂದು ಸಂವಿಧಾನ ಅಗತ್ಯವಿದೆ ಎಂದು ಮೊತಿಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ 1927ರಲ್ಲಿ ನಡೆದ ಅಂದಿನ ಕಾಂಗ್ರೆಸ್ ಅಧಿವೇಶನದಲ್ಲಿ ಚಿಗುರೊಡೆದ ಆಶಯವು 1950 ರಲ್ಲಿ ಸಾಕಾರಗೊಂಡಿತು. ಯಾವುದೇ ವಿಷಯವು ಚರ್ಚೆಯೇ ಆಗದಿದ್ದಲ್ಲಿ ಬೆಳಕು ಕಾಣುವುದು ಹೇಗೆ ? ಎಂದು ಪ್ರಶ್ನಿಸಿದರು.
ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ. ಕೆ. ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನ ಸಭಾ ಸಚಿವಾಲಯದ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.