BengaluruCrime

ಹತ್ಯೆಗೆ ಸ್ಕೆಚ್‌: ಗೋಪಾಲಕೃಷ್ಣ ವಿರುದ್ಧ ದೂರು ಕೊಟ್ಟಿದ್ದೇನೆ: ಎಸ್‌.ಆರ್‌.ವಿಶ್ವನಾಥ್‌

ಬೆಂಗಳೂರು: ನನ್ನ ಹತ್ಯೆಗೆ ಸ್ಕೆಚ್‌ ಹಾಕಿದ ಪ್ರಕರಣ ಸಂಬಂಧ ನಾನು ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಕೀಯವಾಗಿ ಜಿದ್ದಿಗೆ ಬರಲಿ ನಾನು ಫೈಟ್‌ ಮಾಡುತ್ತೇನೆ. ಆದರೆ, ಕೊಲೆ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದು ಸರಿಯಲ್ಲ.  ಈ ಘಟನೆಯಿಂದ ಕ್ಷೇತ್ರದ ಜನ ಶಾಕ್‌ ಆಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದ ಬಗ್ಗೆ ತನಿಖೆಯಾಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಶಾಸಕ ಎಸ್‌.ಆರ್‌.ವಿಶ್ವನಾಥ್‌, ಕುಳ್ಳ ದೇವರಾಜ್‌ ನಿನ್ನೆಯಷ್ಟೇ ನನಗೆ ಕ್ಷಮಾಪಣಾ ಪತ್ರ ಬರೆದಿದ್ದಾನೆ. ಇದಾದ ಮೇಲೆಯೇ ನನಗೆ ಕೊಲೆಗೆ ಸ್ಕೆಚ್‌ ಹಾಕಿರುವ ವಿಷಯ ಗೊತ್ತಾಗಿದ್ದು. ಹೀಗಾಗಿ, ನಾನು ರಾಜಾನುಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಈಗಾಗಲೇ ನಾನು ಪೊಲೀಸ್‌ ರಕ್ಷಣೆ ಬೇಕೆಂದು ನಾಲ್ಕು ಬಾರಿ ಪತ್ರ ಬರೆದಿದ್ದೇನೆ. ನನ್ನ ಕೊಲೆಗೆ ಸ್ಕೆಚ್‌ ಹಾಕಿರುವ ಬಗ್ಗೆಯೂ ಸಿಎಂ ಹಾಗೂ ಗೃಹಸಚಿವರ ಜೊತೆ ಮಾತನಾಡಿದ್ದೇನೆ. ಅವರು ನನಗೆ ಸೂಕ್ತ ಭದ್ರತೆ ಒದಗಿಸುವುದಾಗಿ ಹೇಳಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕ ವಿಶ್ವನಾಥ್‌ ಹೇಳಿದರು.

ಕೆಲವರು ನನ್ನ ಸುತ್ತ ರೌಡಿಗಳೇ ಇದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಅವರ ಹಿಂದೆ ಬರೀ ಸಾಧು ಸಂತರೇ ಇದ್ದಾರಾ..? ಅವರ ಹಿಂದೆ ಯಾರು ಇದ್ದಾರೆ ಎಂದು ನಾನು ಹೇಳುವುದಿಲ್ಲ ಎಂದು ಹೇಳುವ ಮೂಲಕ ಶಾಸಕ ವಿಶ್ವನಾಥ್‌ ಅವರು ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ತಿರುಗೇಟು ನೀಡಿದರು.

ಯಾರೋ ಪ್ರಭಾವ ಬಳಸಿ ಕಾಂಗ್ರೆಸ್‌ ಮುಖಂಡ ಗೋಪಾಲಕೃಷ್ಣ ಅವರನ್ನು ಬಿಡಿಸಿದ್ದಾರೆ. ರಾತ್ರಿಯೇ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಆದ್ರೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಯಾರೇ ತಪ್ಪಿತಸ್ಥರಿರಲಿ, ಕೂಡಲೇ ಕ್ರಮ ಆಗಬೇಕು ಎಂದು ಶಾಸಕ ಎಸ್‌.ಆರ್‌.ವಿಶ್ವನಾಥ್‌ ಹೇಳಿದ್ದಾರೆ.

ಮೂರೂವರೆ ಗಂಟೆಯಷ್ಟು ವಿಡಿಯೋ ನನ್ನ ಬಳಿ ಇದೆ. ಅವರು ಯಾರ ಜೊತೆ ಮಾತನಾಡಿದ್ದಾರೆ. ಏನೆಲ್ಲಾ ಮಾತನಾಡಿದ್ದಾರೆ. ಯಾರ ಜೊತೆ ಫೋನ್‌ನಲ್ಲಿ ಮಾತನಾಡಿದ್ದಾರೆ ಎಂಬ ವಿವರ ನನ್ನ ಬಳಿ ಇದೆ ಎಂದು ಶಾಸಕ ವಿಶ್ವನಾಥ್‌ ಸಂದರ್ಭದಲ್ಲಿ ಹೇಳಿದ್ದಾರೆ. ಕೊಲೆಗೆ ಸ್ಕೆಚ್‌ ಹಾಕುತ್ತಿರುವ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆ ಬಗ್ಗೆ ಗೊತ್ತಿದ್ದಿದ್ದರೆ ಎಚ್ಚೆತ್ತುಕೊಳ್ಳುತ್ತಿದ್ದೆ. ಇಷ್ಟು ದಿನ ನಾನು ಆರಾಮಾಗೇ ಓಡಾಡಿಕೊಂಡಿದ್ದೆ ಎಂದು ವಿಶ್ವನಾಥ್‌ ಹೇಳಿದ್ದಾರೆ

Share Post