Bengaluru

SC/ST  ಪಂಗಡದ ಜನರಿಗೆ ಬಜೆಟ್‌ನಲ್ಲಿ ನ್ಯಾಯಯುತ ಅನುದಾನ ಒದಗಿಸಿ : ಸಿಎಂಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ಮಾರ್ಚ್‌ನಲ್ಲಿ ನಡೆಯುವ ರಾಜ್ಯ ಬಜೆಟ್‌ ಕುರಿತು ಸಿದ್ದರಾಮಯ್ಯ ಸಿಎಂ ಬೊಮ್ಮಾಯಿಗೆ ಅವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಬಜೆಟ್‌ನಲ್ಲಿ ನ್ಯಾಯಯುತ ಅನುದಾನ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.  2013 ರಲ್ಲಿ ನಮ್ಮ ಸರ್ಕಾರ ಇದ್ದಾಗ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟು ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮ-2013 ಅನ್ನು ಜಾರಿಗೆ ತಂದೆವು. ಈ ಕಾನೂನನ್ನು ಜಾರಿಗೆ ತಂದದ್ದರ ಪರಿಣಾಮವಾಗಿ ಪರಿಶಿಷ್ಟ ಜಾತಿ, ಪಂಗಡಗಳ ಮಕ್ಕಳಿಗೆ ಉತ್ತಮ ಶಿಕ್ಷಣ, ಯುವಕರಿಗೆ ಉದ್ಯೋಗ, ವಾಸಿಸುವ ಪ್ರದೇಶಗಳಿಗೆ ಮೂಲಭೂತ ಸೌಕರ್ಯ, ಕೃಷಿಕರಿಗೆ ನೆರವು, ಉದ್ಯಮಿಗಳಿಗೆ, ಗುತ್ತಿಗೆದಾರರಿಗೆ ಉತ್ತೇಜನ ಮುಂತಾದ ಯೋಜನೆಗಳು ಸಮರ್ಥವಾಗಿ ಜಾರಿಯಾಗಿದ್ದವು.

ಮಕ್ಕಳು ಶಿಕ್ಷಣವನ್ನು ಪಡೆದ ನಂತರ ಯುವಜನರಿಗೆ ಉದ್ಯೋಗ ಸಿಗಲಿ ಎಂಬ ಕಾರಣಕ್ಕಾಗಿ 2017 ರ ಬಜೆಟ್‍ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿ, ರಾಜ್ಯದ 5 ಲಕ್ಷ ಯುವಕ-ಯುವತಿಯರಿಗೆ ತರಬೇತಿಯನ್ನು ಕೊಡಿಸಿದ್ದೆವು. ಇವರಲ್ಲಿ ಒಂದು ಲಕ್ಷ ಜನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಯುವಕ, ಯುವತಿಯರಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಎಲ್ಲ ವಿಚಾರಗಳನ್ನು ಕಡೆಗಣಿಸಿದೆ.

2008 ರಿಂದ 2013 ರವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ 10 ಯೋಜನೆಗಳನ್ನು ಜಾರಿಗೆ ತಂದಿತ್ತು. ಅದರಲ್ಲಿ 7 ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಕೇವಲ ರೂ.100 ಗಳಷ್ಟು ವಿದ್ಯಾರ್ಥಿ ವೇತನ ಹೆಚ್ಚಿಸುವ ಉದ್ದೇಶ ಹೊಂದಿದ್ದವು. ಮತ್ತೊಂದು, ಕರಾವಳಿಯ ಕೊರಗ ಜನಾಂಗಕ್ಕಾಗಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮವನ್ನು 2008-09 ರಲ್ಲಿ ಘೋಷಿಸಲಾಗಿತ್ತು. ಆ ಯೋಜನೆ ಇದುವರೆಗೂ ಜಾರಿಯಾಗಿಲ್ಲ.

ಆದರೆ 2019 ರಲ್ಲಿ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಕೇವಲ 7 ಕಾರ್ಯಕ್ರಮಗಳನ್ನು ಮಾತ್ರ ಈ ವರ್ಗಗಳ ಜನರಿಗಾಗಿ ರೂಪಿಸಿದೆ. ಈ 7 ಕಾರ್ಯಕ್ರಮಗಳಲ್ಲಿ ಪರಿಶಿಷ್ಟ ಪಂಗಡದ ಆಶ್ರಮ ಶಾಲೆಗಳನ್ನು ವಾಲ್ಮೀಕಿ ಆಶ್ರಮ ಶಾಲೆ ಎಂದು ನಾಮಕರಣ ಮಾಡಿದ್ದೂ ಒಂದು. ಎಲ್ಲ ಜಾತಿಗಳ 30 ಸಂಯುಕ್ತ ಹಾಸ್ಟೆಲ್‍ಗಳನ್ನು ಸ್ಥಾಪಿಸಲಾಗುವುದೆಂದು 2019 ರಲ್ಲಿ ಘೋಷಣೆ ಮಾಡಿದಿರಿ ಅದು ಈವರೆಗೂ ಅನುಷ್ಠಾನವಾಗಲಿಲ್ಲ. ನಿಮ್ಮ 7 ಕಾರ್ಯಕ್ರಮಗಳಲ್ಲಿ ಅನುಷ್ಠಾನ ಮಾಡಿರುವುದು ಒಂದೇ ಒಂದು ಕಾರ್ಯಕ್ರಮ ಮಾತ್ರ. ಉಳಿದ ಯೋಜನೆಗಳೆಲ್ಲ ಪ್ರಸ್ತಾವನೆಗಳಲ್ಲೆ ಇವೆ ಎಂದು ಸಮಾಜ ಕಲ್ಯಾಣ ಇಲಾಖೆಯೆ ನನಗೆ ಮಾಹಿತಿ ನೀಡಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ವಸತಿ ಯೋಜನೆಗಳಿಗೂ ಈ ಸರ್ಕಾರವು ಅನುದಾನ ಕಡಿಮೆ ಮಾಡಿದೆ. “ವಾಸಿಸುವವರೆ ನೆಲದ ಒಡೆಯ” ಎಂಬ ಯೋಜನೆಯನ್ನು ಜಾರಿಗೆ ತಂದಿದ್ದೆವು. ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಯೋಜನೆ ಚಾಲನೆ ನೀಡಿದ್ದೆವು. ಬಿಜೆಪಿ ಸರ್ಕಾರ ಬಂದು 3 ವರ್ಷಗಳಾದರೂ ಈ ಯೋಜನೆಗಳು ನಿಂತಲ್ಲೇ ಇವೆ. ಬಗರ್‍ಹುಕುಂ ಸಾಗುವಳಿ ಮಾಡುತ್ತಿರುವವರಿಗೆ ಫಾರಂ-57 ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಅರ್ಜಿಗಳು ವಿಲೇವಾರಿಯಾಗದೆ ಬಾಕಿಯಾಗಿವೆ.

ಖಾಲಿ ಇರುವ ಸರ್ಕಾರಿ ಉದ್ಯೋಗಗಳನ್ನೂ ಭರ್ತಿ ಮಾಡುತ್ತಿಲ್ಲ, ಬ್ಯಾಕ್‍ಲಾಗ್ ಹುದ್ದೆಗಳನ್ನೂ ಭರ್ತಿ ಮಾಡುತ್ತಿಲ್ಲ. ನಿರುದ್ಯೋಗದ ಸಮಸ್ಯೆ ತೀವ್ರವಾಗಿದೆ. ರಾಜ್ಯ ಸರ್ಕಾರವಷ್ಟೆ ಅಲ್ಲ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವೂ ಯುವ ನಿರುದ್ಯೋಗಿಗಳ ವಿರುದ್ಧವಾದ ನಿಲುವು ತಾಳಿದೆ. ಸರ್ಕಾರಿ ಉದ್ಯೋಗಗಳು ಇಲ್ಲವೆಂದರೆ ಮೀಸಲಾತಿಯೂ ಇಲ್ಲವೆಂದು ಅರ್ಥ. ಇದರಿಂದಾಗಿ ವಿದ್ಯಾವಂತ ಯುವಜನರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಸ್ವಯಂ ಉದ್ಯೋಗ ಮಾಡುವವರಿಗೆ ಆದ್ಯತೆಗಳು ಸಿಗುತ್ತಿಲ್ಲ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಿಗೆ ಬಿಡುಗಡೆ ಮಾಡುವ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ.  ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ರೂ.1650 ಕೋಟಿಗಳವರೆಗೆ ಅನುದಾನವನ್ನು ಒದಗಿಸುತ್ತಿದ್ದೆವು. ಈಗ ರೂ.1350 ಕೋಟಿಗಳಿಗೆ ಇಳಿದಿದೆ.

ಸಮಾಜದ ಅಂಚಿನಲ್ಲಿರುವ ಜನರ ಕಲ್ಯಾಣ ಸಾಧ್ಯವಾಗದೆ ಯಾವುದೆ ರಾಜ್ಯವಾಗಲಿ, ಯಾವುದೆ ದೇಶವಾಗಲಿ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಅರ್ಥ ಮಾಡಿಕೊಂಡು ಈ ವರ್ಷದ ಬಜೆಟ್‍ನಲ್ಲಿ ನ್ಯಾಯಯುತವಾಗಿ ಅನುದಾನಗಳನ್ನು ಒದಗಿಸಬೇಕು ಹಾಗೂ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯೋಗ, ಕೃಷಿ, ವ್ಯಾಪಾರ, ಮೂಲಭೂತ ಸೌಕರ್ಯ ಮುಂತಾದ ಯೋಜನೆಗಳಿಗೆ ನ್ಯಾಯಯುತವಾಗಿ ಅನುದಾನಗಳನ್ನು ಒದಗಿಸಬೇಕು. ದಮನಿತ ವರ್ಗಗಳ ಕಲ್ಯಾಣವನ್ನು ಈ ಬಜೆಟ್‍ನಲ್ಲಿಯೂ ನಿರ್ಲಕ್ಷಿಸಿದ್ದೆ ಆದರೆ ಸರ್ಕಾರದ ವಿರುದ್ಧ ತೀವ್ರ ಹೋರಾಟವನ್ನು ರೂಪಿಸಬೇಕಾಗುತ್ತದೆಂದು ತಮಗೆ ತಿಳಿಸ ಬಯಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share Post