BengaluruHealth

ಪ್ರಧಾನಿ ಮೋದಿ ಜನ್ಮದಿನ ಹಿನ್ನೆಲೆ; 15 ದಿನ ಆರೋಗ್ಯ ರಕ್ಷಣೆ ಅಭಿಯಾನ -ಸುಧಾಕರ್

ಬೆಂಗಳೂರು; ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ, ಸೆಪ್ಟೆಂಬರ್‌ 17 ರಿಂದ ಮಹಾತ್ಮ ಗಾಂಧಿ ಜಯಂತಿವರೆಗೆ (ಅಕ್ಟೋಬರ್‌ 2) ರಾಜ್ಯದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ವಿಶೇಷ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ. ಈ ಅಭಿಯಾನದ ರೂಪರೇಷೆ ಸಿದ್ಧಪಡಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರು ವಿವಿಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳೊಂದಿಗೆ ವೀಡಿಯೋ ಸಭೆ ನಡೆಸಿದರು.

ಈ ಅಭಿಯಾನಕ್ಕೆ ಸೆಪ್ಟೆಂಬರ್‌ 17 ರಂದು ಬಿಎಂಸಿಆರ್‌ಐನಲ್ಲಿ (ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ) ಚಾಲನೆ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಇಲ್ಲ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು. ರಾಜ್ಯದಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಂದಾಗಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಮಧುಮೇಹ, ಬಿಪಿ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟು ಎಂಬುದನ್ನು ಪತ್ತೆ ಮಾಡಬೇಕಿದೆ. ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ನಿರಂತರವಾಗಿ ಈ ಕಾರ್ಯ ನಡೆಯಬೇಕಿದೆ. ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತಿಳಿಸಿ, ಗುರಿ ನಿಗದಿ ಮಾಡಿ ಜನರನ್ನು ಉಪಕೇಂದ್ರಕ್ಕೆ ಕರೆದುಕೊಂಡು ಬರಲು ಸೂಚಿಸಬೇಕು. ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಪ್ರಮಾಣ ಶೇ.20 ರಷ್ಟು ಮಾತ್ರ ಆಗಿದೆ. ಈ ಹದಿನೈದು ದಿನಗಳಲ್ಲಿ ಲಸಿಕಾಕರಣವು ದೊಡ್ಡ ಮಟ್ಟದಲ್ಲಿ ನಡೆಯಲು ಕ್ರಮ ವಹಿಸಬೇಕು. ಎನ್‌ಜಿಒಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳನ್ನು ಆಹ್ವಾನಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಬೇಕು ಎಂದು ಸೂಚಿಸಿದರು.

ನವಜಾತ ಶಿಶುವಿನಿಂದ ಆರಂಭವಾಗಿ, ವಯೋವೃದ್ಧರವೆಗೂ ಸರ್ಕಾರ ನೀಡಿರುವ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರುವ ಚಿಕಿತ್ಸೆ, ತಪಾಸಣೆಯ ಸೌಲಭ್ಯಗಳ ಬಗ್ಗೆ ಅನೇಕರಿಗೆ ಗೊತ್ತೇ ಇಲ್ಲ. ಅಂತಹವರಿಗೆ ಜಾಗೃತಿ ಮೂಡಿಸಿ ತಪಾಸಣೆ ಮಾಡಿಸಿಕೊಳ್ಳಲು ಹೇಳಬೇಕು. ರಾಜ್ಯದಲ್ಲಿ ಕ್ಯಾನ್ಸರ್‌ ತಪಾಸಣೆಯನ್ನು ಕೂಡ ಮಾಡಬೇಕು. ಜಿಲ್ಲಾ ಮಟ್ಟ ಅಥವಾ ತಾಲೂಕು ಮಟ್ಟದಲ್ಲಿ ತಪಾಸಣೆ ವ್ಯವಸ್ಥೆ ಮಾಡಿ, ಜನರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು. ಹಾಗೆಯೇ, 35 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ ಪುರುಷರನ್ನು ಕರೆದುಕೊಂಡು ಬಂದು ತಪಾಸಣೆ ಮಾಡಿಸಬೇಕು. ಐದು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ನಡೆಯಬೇಕು. ಹೀಗೆ ತಪಾಸಣೆ ಮಾಡಿದರೆ ಸಾವುಗಳನ್ನು ತಪ್ಪಿಸಬಹುದು. ಜೊತೆಗೆ 8, 9, 10 ನೇ ವರ್ಷ ವಯಸ್ಸಿನ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

Share Post