ವಿಧಾನಸೌಧದ ಮುಂದೆ ಹೈಡ್ರಾಮಾ; ಸೀಮೆಎಣ್ಣೆ ಸುರಿದುಕೊಂಡು ದಂಪತಿ ಆತ್ಮಹತ್ಯೆ ಯತ್ನ
ಬೆಂಗಳೂರು; ವಿಧಾನಸೌಧದ ಮೂರನೇ ಗೇಟ್ ಬಳಿ ಮುಸ್ಲಿಂ ದಂಪತಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ವ್ಯಾಪಾರಕ್ಕಾಗಿ ಸಹಕಾರಿ ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು, ಬ್ಯಾಂಕ್ ಸಿಬ್ಬಂದಿಯ ಕಿರುಕುಳದಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ದಂಪತಿ ಯತ್ನಿಸಿದ್ದಾರೆ. ಪೊಲೀಸರು ಇದನ್ನು ತಡೆದಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಶಾಯಿಸ್ತಾ ಬಾನು ಹಾಗೂ ಮುನಾಯಿದುಲ್ಲಾ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದ ದಂಪತಿ. ಬೆಂಗಳೂರು ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಇವರು ಆಸ್ತಿ ಮೇಲೆ 50 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಇದುವರೆಗೆ ಬಡ್ಡಿ ಸೇರಿ 97 ಲಕ್ಷ ರೂಪಾಯಿ ಸಾಲ ಮರು ಪಾವತಿ ಮಾಡಿದ್ದಾರಂತೆ. ಆದರೂ ಬ್ಯಾಂಕ್ ಸಿಬ್ಬಂದಿ ಕಿರುಕುಳ ನೀಡುತ್ತಿದ್ದಾರಂತೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ದಂಪತಿ ಆರೋಪ ಮಾಡಿದ್ದಾರೆ.
ವಿಧಾನಸೌಧದ ಮೂರನೇ ಗೇಟ್ ಬಳಿ ಬಂದ ದಂಪತಿ, ಇದ್ದಕ್ಕಿದ್ದಂತೆ ಅನ್ಯಾಯ, ಅನ್ಯಾಯ ಎಂದು ಕೂಗಿದ್ದಾರೆ. ನಂತರ ಜೊತೆಗೆ ತಂದಿದ್ದ ಸೀಮೆಎಣ್ಣೆಯನ್ನ ಮೈಮೇಲೆ ಸುರಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲಿ ಪೊಲೀಸರು ಹಾಗೂ ಸ್ಥಳೀಯರು ಅವರನ್ನು ತಡೆದಿದ್ದಾರೆ.
ಇವರು ಪಾದರಾಯನಪುರ ನಿವಾಸಿಗಳು ಎಂದು ತಿಳಿದುಬಂದಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ತಮಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆದರೂ ಬ್ಯಾಂಕ್‌ನವರು ನಮಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ದಂಪತಿ ಆರೋಪ ಮಾಡಿದೆ.