ಊರಿಗೆ ಮನುಷ್ಯ ಅಲ್ಲ, ಸ್ಮಶಾನಕ್ಕೆ ಹೆಣ ಅಲ್ಲ ಎಂಬಂತಿದೆ ಕಾಂಗ್ರೆಸ್ ನಾಯಕರ ಧೋರಣೆ-ಕಂದಾಯ ಸಚಿವ
ಬೆಂಗಳೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿ ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಕಾಂಗ್ರೆಸ್‌ನವರು ಊರಿಗೆ ಮನುಷ್ಯ ಅಲ್ಲ..ಸ್ಮಶಾನಕ್ಕೆ ಹೆಣ ಅಲ್ಲ ಎಂಬಂತೆ ಬದುಕುತ್ತಿದ್ದಾರೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ.
ಹಿಜಾಬ್ ವಿಚಾರವಾಗಿ ಅವರಲ್ಲೇ ಗೊಂದಲ ಇದೆ. ಸಿದ್ದರಾಮಯ್ಯ ಡಿಕೆಶಿ ನಡುವೆ ಫೈಟ್ ನಡೆಯುತ್ತಿದೆ. ಯಾರಿಗೆ ಬೆಂಬಲ ನೀಡಬೇಕು ಎಂದು ಅವರಲ್ಲೇ ಒಮ್ಮತ ಇಲ್ಲ. ವಿಧಾನಸಭೆ ನಡೆಯೋದು ಜನರ ಸಮಸ್ಯೆ ಪರಿಹಾರ ಮಾಡೋದಕ್ಕೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲಿ, ವಿದ್ಯೆ ಕಲಿಯಲಿ ಎಂಬುದರ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿಯಿಲ್ಲ. ಈಗ ತಲೆದೋರಿರುವ ಸಮಸ್ಯೆಯನ್ನು ಸದನದಲ್ಲಿ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕೈಜೋಡಿಸಬೇಕೇ ಹೊರತು, ಇನ್ನೂ ಬೆಂಕಿ ಹಚ್ಚುವ ಕೆಲಸ ಮಾಡ್ತಿದಾರೆ. ಮುಂಬರುವ ಚುನಾವಣೆಯಲ್ಲಿ ವೋಟಿಗಾಗಿ ಈ ವಿಚಾರವನ್ನು ದೊಡ್ಡದು ಮಾಡ್ತಿದಾರೆ. ಈಗ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಗಲಾಟೆ ಶುರು ಮಾಡಿದ್ದಾರೆ. ಇವರಿಗೆ ರಾಜ್ಯದ ಜನರ ಬಗ್ಗೆ, ಅವರ ಸಮಸ್ಯೆ ಬಗ್ಗೆ ಆಸಕ್ತಿ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ರು.