BengaluruPolitics

ಇಂದು ಮಧ್ಯಾಹ್ನ ಜೆಡಿಎಸ್‌ ಎರಡನೇ ಪಟ್ಟಿ ರಿಲೀಸ್‌; ಫೈನಲ್‌ ಆಯ್ತಾ ಹಾಸನ ಟಿಕೆಟ್‌..?

ಬೆಂಗಳೂರು; ಎಲ್ಲರಿಗಿಂತ ಮೊದಲು ಜೆಡಿಎಸ್‌ ಮೊದಲ ಪಟ್ಟಿ ರಿಲೀಸ್‌ ಮಾಡಿತ್ತು. ಇದೀಗ ಜೆಡಿಎಸ್‌ ಎರಡನೇ ಪಟ್ಟಿ ರಿಲೀಸ್‌ಗೆ ಸಿದ್ಧವಾಗಿದೆ. ಇಂದು ಮಧ್ಯಾಹ್ನ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಎರಡನೇ ಪಟ್ಟಿ ರಿಲೀಸ್‌ ಮಾಡಲಿದ್ದಾರೆ. ಆದ್ರೆ ಹಾಸನ ಕ್ಷೇತ್ರದ ಅಭ್ಯರ್ಥಿ ಹೆಸರು ಈಗಲೇ ಘೋಷಣೆ ಮಾಡೋದು ಅನುಮಾನ ಎನ್ನಲಾಗುತ್ತಿದೆ.

ಜೆಡಿಎಸ್‌ ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ. ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಅಂತಿಮ ಮಾಡಲು ನಿನ್ನೆ ದೇವೇಗೌಡರ ನಿವಾಸದಲ್ಲಿ ಸಭೆ ನಡೆಸಲಾಗಿತ್ತು. ಈ ವೇಳೆ ಅಂದುಕೊಂಡಂತೆಯೇ ಹಾಸನ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಗೊಂದಲ ಉಂಟಾಗಿದೆ. ಹಾಸನ ಕ್ಷೇತ್ರದಲ್ಲಿ ಏನಾದರೂ ಮಾಡಿ ಸ್ಪರ್ಧೆ ಮಾಡಲೇಬೇಕು ಎಂದು ಭವಾನಿ ರೇವಣ್ಣ ಹಠ ಹಿಡಿದಿದ್ದಾರೆ. ನಿನ್ನೆಯೇ ಸಭೆಯಲ್ಲೂ ಹಠ ಮುಂದುವರೆದಿದೆ. ಸಭೆಯಲ್ಲಿ ಹಾಸನ ಕ್ಷೇತ್ರದ ಅಭ್ಯರ್ಥಿ ಬಗ್ಗೆ ಏನೂ ಹೇಳದ ಹಿನ್ನೆಲೆಯಲ್ಲಿ ಭವಾನಿಯವರು ಅರ್ಧದಲ್ಲೇ ಸಭೆಯಿಂದ ಹೊರ ನಡೆದಿದ್ದಾರೆ. ಈ ಕಾರಣದಿಂದಾಗಿ ನಿನ್ನೆಯ ಸಭೆಯಲ್ಲಿ ಹಾಸನ ಕ್ಷೇತ್ರದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ ದೇವೇಗೌಡರು ಹಾಸನ ಟಿಕೆಟ್‌ನ್ನು ಘೋಷಣೆ ಮಾಡದಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಂದು ಹಾಸನ ಬಿಟ್ಟು ಉಳಿದ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡುವ ಸಾಧ್ಯತೆ ಇದೆ.

 

Share Post