Bengaluru

ಹಿಜಾಬ್‌ ಇಸ್ಲಾಂನ ಅಗತ್ಯ ಭಾಗವಲ್ಲ; ಸರ್ಕಾರದ ಆದೇಶ ಕಾನೂನುಬದ್ಧ ಎಂದು ಹೈಕೋರ್ಟ್‌

ಹಿಜಾಬ್‌ ಇಸ್ಲಾಂನ ಅಗತ್ಯ ಭಾಗವಲ್ಲ. ಸಮವಸ್ತ್ರ ಕುರಿತಂತೆ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ ಎಂದು ಹೈಕೋರ್ಟ್‌ ತ್ರಿಸದಸ್ಯಪೀಠ ಮಹತ್ವದ ತೀರ್ಪು ನೀಡಿದೆ. ಹಿಜಾಬ್‌ಗೆ ಅವಕಾಶ ನೀಡುವಂತೆ ಸಲ್ಲಿಸಿದ್ದ ಎಲ್ಲಾ ರಿಟ್‌ ಅರ್ಜಿಗಳನ್ನೂ ವಜಾಗೊಳಿಸಿ ಹೈಕೋರ್ಟ್‌ ಪೀಠ ಆದೇಶ ನೀಡಿದೆ.

ಸರ್ಕಾರ ನೀಡಿದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ. ಶಾಲಾ-ಕಾಲೇಜು ಆಡಳಿತ ಮಂಡಳಿ ನಿರ್ಧರಿಸುವ ಸಮವಸ್ತ್ರವನ್ನು ಧರಿಸಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರಬೇಕು ಎಂದು ಕೋರ್ಟ್‌ ಹೇಳಿದೆ.

ಸರ್ಕಾರದ ಆದೇಶದಂತೆ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರಗಳನ್ನು ನಿಗದಿ ಮಾಡುವ ಅಧಿಕಾರವಿದೆ. ಶಾಲಾ-ಕಾಲೇಜು ಆಡಳಿತ ಮಂಡಳಿಗಳು ನಿರ್ಧರಿಸುವ ವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂದು ಹೈಕೋರ್ಟ್‌ ಹೇಳಿದೆ.

 

ಹೈಕೋರ್ಟ್‌ ತೀರ್ಪಿನ ಪ್ರಮುಖ ಅಂಶಗಳು

  1. ಹಿಜಾಬ್‌ ಇಸ್ಲಾಂನ ಅಗತ್ಯ ಭಾಗವಲ್ಲ. ಸಮವಸ್ತ್ರ ಕುರಿತಂತೆ ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ
  2. ಸಮವಸ್ತ್ರ ನಿಗದಿಪಡಿಸುವ ಅಧಿಕಾರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ಇದೆ
  3. ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದು ಕಡ್ಡಾಯವೇನಲ್ಲ
  4. ಉಡುಪಿ ಕಾಲೇಜಿಗೆ ನಿರ್ದೇಶನ ನೀಡುವ ಯಾವ ಅಗತ್ಯವೂ ಇಲ್ಲ
  5. ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶವಿಲ್ಲ

ಏನಿದು ಹಿಜಾಬ್‌ ವಿವಾದ..?

ಒಂದು ತಿಂಗಳ ಹಿಂದೆ ಉಡುಪಿಯ ಸರ್ಕಾರಿ ಕಾಲೇಜಿನಲ್ಲಿ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಬಂದ ಹಿನ್ನೆಲೆಯಲ್ಲಿ ಅಲ್ಲಿ ವಿರೋಧ ವ್ಯಕ್ತವಾಗಿತ್ತು. ಈ ವಿವಾದ ಇಡೀ ರಾಜ್ಯಕ್ಕೆ ಹರಡಿತ್ತು. ಪರ-ವಿರೋಧದ ಹೋರಾಟಗಳು ನಡೆದಿದ್ದವು. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಲು ಅವಕಾಶ ಕೊಟ್ಟರೆ, ನಾವು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವುದಾಗಿ ಕೆಲ ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು. ಈ ವಿವಾದ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ಹಲವು ರಾಜ್ಯಗಳಲ್ಲೂ ಈ ಹಿಜಾಬ್‌ ವಿವಾದ ತಲೆದೋರಿತ್ತು.

ಉಡುಪಿ ಜಿಲ್ಲೆಯಲ್ಲಿ ಆರಂಭವಾದ ವಿವಾದ, ಶಿವಮೊಗ್ಗ, ಮೈಸೂರು, ಬೀದರ್, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ತಾರಕಕ್ಕೇರಿತು. ಕೊನೆಗೆ ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತು. ಕೆಲವೆಡೆ ಶಾಲಾ ಕಾಲೇಜು ಆಡಳಿತ ಮಂಡಳಿ ಅನಿರ್ಧಿಷ್ಟಾವಧಿ ರಜೆಯನ್ನೂ ನೀಡಿತು. ಇಂತಹ ಪರಿಸ್ಥಿತಿಯಲ್ಲಿ ಜನವರಿ 31 ರಂದು ಹಿಜಾಬ್ ವಿವಾದ ಸಂಬಂಧ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಯಿತು. ಬಳಿಕ, ಫೆಬ್ರವರಿ 3 ರಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಸಲಾಯಿತು. ಫೆಬ್ರವರಿ 9 ರಂದು ಪ್ರಕರಣ ಪೂರ್ಣ ಪೀಠಕ್ಕೆ ವರ್ಗಾವಣೆ ಮಾಡಲಾಗಿತ್ತು. ಸುಮಾರು 11 ದಿನಗಳ ಕಾಲ ವಾದ-ಪ್ರತಿವಾದಿ ಆಲಿಸಿದ್ದ ಹೈಕೋರ್ಟ್‌ ತ್ರಿಸದಸ್ಯ ಪೀಠ, ತೀರ್ಪುನ್ನು ಕಾಯ್ದಿರಿಸಿತ್ತು.

Share Post