ಲೋಕಸಭಾ ಚುನಾವಣೆಗೆ ಸಜ್ಜು; ತೇಜಸ್ವಿನಿ ಅನಂತಕುಮಾರ್‌ಗೆ ಗಾಳ ಹಾಕಿತಾ ಕಾಂಗ್ರೆಸ್..?
ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಹೀಗಾಗಿ ಎಲ್ಲಾ ಪಕ್ಷಗಳೂ ಚುನಾವಣೆಗೆ ಸಜ್ಜಾಗುತ್ತಿವೆ. ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ. ಹೀಗಾಗಿ ರಾಜ್ಯದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಪಡೆಯಲು ಕಾಂಗ್ರೆಸ್ ಈಗಲೇ ತಾಲೀಮು ಶುರು ಮಾಡಿದೆ. ಬೇರೆ ಪಕ್ಷಗಳಲ್ಲಿರುವ ಅರ್ಹರನ್ನು ಕಾಂಗ್ರೆಸ್ ಸೆಳೆದು ಗೆಲ್ಲಿಸಿಕೊಂಡು ಬರೋದಕ್ಕೆ ಪ್ರಯತ್ನ ನಡೆಯುತ್ತಿದೆ. ಅದರ ಭಾಗವಾಗಿ ಮಾಜಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಕಾಂಗ್ರೆಸ್‌ಗೆ ಸೆಳೆಯೋದಕ್ಕೆ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬಲ್ಲ ಮೂಲಗಳ ಪ್ರಕಾರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಕಾಂಗ್ರೆಸ್ ಕರೆತರೋ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅನಂತ್ ಕುಮಾರ್ ಅವರು ತೀರಿಹೋದ ಮೇಲೆ ಬೆಂಗಳೂರು ದಕ್ಷಿಣ ಲೋಕಸಭಾ ಸ್ಥಾನಕ್ಕೆ ತೇಜಸ್ವಿನಿ ಅನಂತ್‌ಕುಮಾರ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಬಿಜೆಪಿ ಹೈಕಮಾಂಡ್ ಕೊನೇ ಕ್ಷಣದಲ್ಲಿ ತೇಜಸ್ವಿ ಸೂರ್ಯಗೆ ಟಿಕೆಟ್ ನೀಡಿತ್ತು. ಇದರಿಂದ ತೇಜಸ್ವಿನಿಯವರು ಮೊದಲಿಗೆ ಅಸಮಧಾನಗೊಂಡರೂ, ಬಿಜೆಪಿ ಪರ ಪ್ರಚಾರ ಮಾಡಿದ್ದರು.
ಇನ್ನು ಬಿಜೆಪಿ ಪಕ್ಷ ಕೂಡಾ ತೇಜಸ್ವಿನಿಯವರಿಗೆ ಪಕ್ಷದಲ್ಲಿ ಉನ್ನತ ಹುದ್ದೆ ನೀಡಿ ಸಮಧಾನಪಡಿಸಿತ್ತು. ಆದ್ರೆ ಇದೀಗ ಶೆಟ್ಟರ್, ಸವದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಮೂಲ ಹಾಗೂ ನಿಷ್ಠರಿಗೆ ಅವಕಾಶಗಳಿಲ್ಲ ಎಂದು ಹೇಳಿ ತೇಜಸ್ವಿನಿಯ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ. ತೇಜಸ್ವಿನಿಯವರು ಕಾಂಗ್ರೆಸ್‌ಗೆ ಬಂದರೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರುವುದಲ್ಲದೆ, ಪಕ್ಷದಲ್ಲಿ ಉತ್ತಮ ಅವಕಾಶಗಳನ್ನು ನೀಡೋದಾಗಿ ಭರವಸೆ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ. ತೇಜಸ್ವಿನಿಯವರ ಮನವೊಲಿಸುವ ಜವಾಬ್ದಾರಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.