ಬೆಂಗಳೂರು ಕರಗಕ್ಕೂ ಅಂಟಿದ ವ್ಯಾಪಾರ ಯುದ್ಧ: ಮಳಿಗೆ ಹಾಕಲು ಬಿಡಲ್ಲ ಎಂದ ಮಾಜಿ ಅಧ್ಯಕ್ಷ
ಬೆಂಗಳೂರು: ಕರಾವಳಿಯಲ್ಲಿ ಶುರುವಾದ ವ್ಯಾಪಾರ ಧರ್ಮಯುದ್ಧ ಇದೀಗ ರಾಜ್ಯಾದ್ಯಂತ ಕಿಚ್ಚಿನಂತೆ ಹಬ್ಬಿದೆ. ಹಿಜಾಬ್, ಕೇಸರಿ ಶಾಲು ನಡುವೆ ಇದೀಗ ಮುಸ್ಲಿಂ ಅಂಗಡಿಗಳು ಹಿಂದೂ ದೇವಾಲಯದ ಬಳಿ ಇರುವಂತಿಲ್ಲ ಎಂದು ತಗಾದೆ ಮಾಡಲಾಗಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಳಿ ಮುಸ್ಲಿಂ ಅಂಗಡಿಗಳನ್ನು ತೆರವುಗೊಳಿಸಿದ್ದು, ಇದೀಗ ರಾಜ್ಯದ ಹಲವೆಡೆ ಹಿಂದೂ ದೇವಸ್ಥಾನಗಳ ಬಳಿಯಿರುವ ಎಲ್ಲಾ ಅಂಗಡಿಗಳನ್ನು ಎತ್ತಂಗಡಿ ಮಾಡಿಸುವ ಕೆಲಸ ನಡೆಯುತ್ತಿದೆ.
ಈ ವಿವಾದ ಇದೀಗ ಬೆಂಗಳೂರು ಕರಗಕ್ಕೂ ಅಂಟಿಕೊಂಡಿದೆ. ಕರಗ ನಡೆಯುವಾಗ ಹಿಂದೂಯೇತರರಿಗೆ ಮಳಿಗೆ ಹಾಕಲು ಬಿಡುವುದಿಲ್ಲ ಎಂದು ದೇಗುಲದ ಮಾಜಿ ಅಧ್ಯಕ್ಷ ಹೇಳಿದ್ದಾರೆ. ಮೈಸೂರು ಮಹಾರಾಜರ ಕಾಲದಿಂದಲೂ ಕರಗ ನಡೆಯುವಾಗ ಮುಸ್ಲಿಂಮರು ಅಂಗಡಿ ಹಾಕುವ ಪದ್ದತಿಯಿಲ್ಲ. ಅದನ್ನು ನಾವು ಪಾಲನೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕರಗ ಸಮಯದಲ್ಲಿ ಮುಸ್ಲಿಂಮರು ಮಳಿಗೆ ತೆರೆಯಲು ನಾವು ಅವಕಾಶ ನೀಡುವುದಿಲ್ಲ ಎಂದು ಧರ್ಮರಾಯಸ್ವಾಮಿ ದೇಗುಲದ ಕರಗ ಮಾಜಿ ಅಧ್ಯಕ್ಷ ಗೋಪಿ ಹೇಳಿದ್ದಾರೆ.