ಶಕ್ತಿ ಯೋಜನೆ ಶುರುವಾಗಿ 6 ತಿಂಗಳು; ಇದುವರೆಗೆ 92 ಕೋಟಿ ಬಾರಿ ಮಹಿಳೆಯರ ಪ್ರಯಾಣ!
ಬೆಂಗಳೂರು; ಶಕ್ತಿ ಯೋಜನೆ ಶುರುವಾಗಿ ನವೆಂಬರ್ 11ಕ್ಕೆ ಆರು ತಿಂಗಳಾಗಿದೆ. ಈ ಯೋಜನೆಯಿಂದಾಗಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಕಳೆದ ಆರು ತಿಂಗಳಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರು 92 ಕೋಟಿ ಬಾರಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ನವೆಂಬರ್ ಮುಗಿಯುವುದರೊಳಗೆ ಶಕ್ತಿ ಯೋಜನೆಯಡಿ ಮಹಿಳೆಯರ ಪ್ರಯಾಣದ ಸಂಖ್ಯೆ 100 ಕೋಟಿ ದಾಟುವುದಾಗಿ ಅಂದಾಜು ಮಾಡಲಾಗಿದೆ.
ರಾಜ್ಯ ಸರ್ಕಾರಿ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಪ್ರತಿದಿನ ಸರಾಸರಿ 60 ರಿಂದ 65 ಲಕ್ಷ ಬಾರಿ ಮಹಿಳೆಯರು ಉಚಿತವಾಗಿ ಓಡಾಡುತ್ತಿದ್ದಾರೆ. ಜೂನ್ 11ರಂದು ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ನವೆಂಬರ್ 11ರ ವೇಳೆಗೆ 92.75 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಸಾಮಾನ್ಯ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದುವರೆಗೆ ಮಹಿಳೆಯರು ಉಚಿತವಾಗಿ ಓಡಾಡಿದ ಪ್ರಯಾಣದ ಟಿಕೆಟ್‌ನ ಮೌಲ್ಯ 2,200 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
ವಿರೋಧ ಪಕ್ಷಗಳ ಟೀಕೆಯ ನಡುವೆಯೂ ಶಕ್ತಿ ಯೋಜನೆ ಸಾಕಷ್ಟು ಯಶಸ್ವಿಯಾಗಿದೆ. ಎಲ್ಲಾ ಸವಾಲುಗಳನ್ನೂ ಜಯಿಸಿ ನಾವು ಯೋಜನೆಯನ್ನು ಸರಿಯಾಗಿ ಅನುಷ್ಠಾನ ಮಾಡಿದ್ದೇವೆ. ರಾಜ್ಯಾದ್ಯಂತ ಎಲ್ಲಾ ಭಾಗದ ಮಹಿಳೆಯರೂ ಈ ಯೋಜನೆಯ ಉಪಯೋಗ ಪಡೆಯುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಶೀಘ್ರದಲ್ಲೇ ಮಹಿಳೆಯರ ಉಚಿತ ಪ್ರಯಾಣ ನೂರು ಕೋಟಿ ದಾಟಲಿದೆ. ಹೀಗಾಗಿ ನವೆಂಬರ್ 17ರಂದು ವಿಶೇಷ ಕಾರ್ಯಕ್ರಮ ಆಯೋಜನೆ ಮಾಡೋದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.