BengaluruNationalPolitics

ಯಡಿಯೂರಪ್ಪರನ್ನು ಹೊಗಳಿದರೆ ಮತ ಬರುತ್ತಾ..?; ಕೇಂದ್ರ ನಾಯಕರು ಬಿಎಸ್‌ವೈ ಜಪ ಮಾಡ್ತಿರೋದ್ಯಾಕೆ..?

ಬೆಂಗಳೂರು; ಮೋದಿ ಜಪ ಮಾಡಿದರೆ ಮತ ಬರುತ್ತೆ ಅನ್ನೋದು ಮಾತಿದೆ… ಆದ್ರೆ ಅದೇ ಮೋದಿ ಕರ್ನಾಟಕದಲ್ಲಿ ಯಡಿಯೂರಪ್ಪ ಜಪ ಮಾಡ್ತಿದ್ದಾರೆ… ಮೋದಿ ಮಾತ್ರ ಅಲ್ಲ, ಕೇಂದ್ರ ಗೃಹಸಚಿವ ಅಮಿತ್‌ ಷಾ ಕೂಡಾ ಯಡಿಯೂರಪ್ಪರನ್ನು ಹಾಡಿಹೊಗಳುತ್ತಿದ್ದಾರೆ… ಯಡಿಯೂರಪ್ಪ ಯಾವಾಗ ಚುನಾವಣೆ ರಾಜಕೀಯದಿಂದ ಹಿಂದೆ ಸರಿದರೋ ಅಂದಿನಿಂದ ಯಡಿಯೂರಪ್ಪರನ್ನು ಉತ್ಸವ ಮೂರ್ತಿಯಂತೆ ಇಟ್ಟುಕೊಂಡು ರಾಜ್ಯದಲ್ಲಿ ಚುನಾವಣೆ ಗೆಲ್ಲೋಕೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಪ್ಲ್ಯಾನ್‌ ಮಾಡಿದೆ… ನಿಜ ಹೇಳಬೇಕು ಅಂದ್ರೆ, ಕರ್ನಾಟಕದಲ್ಲಿ ಯಡಿಯೂರಪ್ಪನ್ನು ಬಿಟ್ಟು ಬಿಜೆಪಿ ರಾಜಕೀಯ ಮಾಡೋದಕ್ಕೆ ಸಾಧ್ಯವಿಲ್ಲ… ಯಡಿಯೂರಪ್ಪ ಅವರನ್ನು ದೂರವಿಟ್ಟು, ಅವರ ಹೆಸರು ಹೇಳದೇ ಸಂಘಟನೆ ಮಾಡಿ ನೋಡೋಣ ಅಂತ ಬಿಜೆಪಿ ಹೈಕಮಾಂಡ್‌ ಎರಡು ತಿಂಗಳ ಹಿಂದೆ ಪ್ರಯತ್ನ ಮಾಡಿತ್ತು… ಅದಕ್ಕಾಯೇ ಕೇಂದ್ರ ಗೃಹ ಸಚಿವರ ಅಮಿತ್‌ ಶಾ ರಾಜ್ಯಕ್ಕೆ ಬಂದಿದ್ದರು… ಮಂಡ್ಯದಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟು ಬೇರೆಯದೇ ಮಂತ್ರ ಜಪಿಸಿದ್ದರು… ಯಾಕಂದ್ರೆ ಅವರಿಗೆ ಬೇರೊಬ್ಬ ನಾಯಕನನ್ನು ಸೃಷ್ಟಿಸಬೇಕು ಹಾಗೂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಕೈಯಿಂದ ಪಕ್ಷವನ್ನು ಹೊರತರಬೇಕು ಅನ್ನೋ ಉದ್ದೇಶ ಇತ್ತು… ಆದ್ರೆ ಈ ಚುನಾವಣೆಯಲ್ಲಿ ಅದು ಅಸಾಧ್ಯ ಅನ್ನೋದು ಕೇಂದ್ರ ನಾಯಕರಿಗೆ ಗೊತ್ತಾಗಿದೆ…. ಹೀಗಾಗೇ ಯಡಿಯೂರಪ್ಪ ಅವರನ್ನು ಹೊಗಳುತ್ತಲೇ ರಾಜಕೀಯ ತಂತ್ರಗಾರಿಕೆಯನ್ನು ಮುಂದುವರೆಸಿದ್ದಾರೆ…

ಕೇಂದ್ರ ಗೃಹ ಸಚಿವ ಅಮಿತ್‌ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಆಗಮಿಸ್ತಿದ್ದಾರೆ… ಅದ್ರಲ್ಲೂ ಯಡಿಯೂರಪ್ಪ ಅವರ ಎಂಬತ್ತನೇ ವರ್ಷದ ಹುಟ್ಟುಹಬ್ಬದ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಾಗಿದೆ… ಅಲ್ಲೂ ಕೂಡಾ ಮೋದಿಯವರು ಯಡಿಯೂರಪ್ಪ ಅವರ ಗುಣಗಾನ ಮಾಡಿದ್ದಾರೆ… ಯಡಿಯೂರಪ್ಪ ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ ಎಂದು ಹೇಳಿದ್ದಾರೆ… ಇನ್ನು ಇದಕ್ಕೂ ಮೊದಲು ಸಿಎಂ ಬೊಮ್ಮಾಯಿಯವರು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಹೆಸರು ಇಡಲು ತೀರ್ಮಾನಿಸಿದ್ದರು.. ಇನ್ನೂ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಷಾ ರಾಜ್ಯಕ್ಕೆ ಆಗಮಿಸಿದ್ದರು.. ಈ ವೇಳೆ ಅವರು ಸಿಎಂ ಬೊಮ್ಮಾಯಿ ಹೆಸರು ಪ್ರಸ್ತಾಪಿಸಲಿಲ್ಲ.. ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಹೆಸರನ್ನು ಮಾತ್ರ ಹೇಳಿದರು…

ಕರ್ನಾಟಕದಲ್ಲಿ ಬಿಜೆಪಿಯನ್ನು ಅತಿಹೆಚ್ಚು ಬೆಂಬಲಿಸುವವರು ಲಿಂಗಾಯತರು… ಲಿಂಗಾಯತರಲ್ಲಿ ಹಲವಾರು ನಾಯಕರಿದ್ದಾರೆ… ಆದ್ರೆ ಬಹುತೇಕ ಲಿಂಗಾಯತರು ಈಗಲೂ ನಂಬೋದು ಯಡಿಯೂರಪ್ಪ ಅವರನ್ನು… ಹೀಗಾಗೇ, ಯಡಿಯೂರಪ್ಪ ಅವರನ್ನು ಬಿಟ್ಟು ರಾಜಕೀಯ ಮಾಡಿದರೆ ಸಾಕಷ್ಟು ಲಿಂಗಾಯತ ಮತಗಳು ಕೈತಪ್ಪಿಹೋಗುವ ಆತಂಕ ಬಿಜೆಪಿಗಿದೆ… ಅದನ್ನು ಅರಿತಿದ್ದರೂ, ಹೊಸ ಗೇಮ್‌ ಪ್ಲ್ಯಾನ್‌ ಮಾಡೋಕೆ ಬಿಜೆಪಿ ಹೈಕಮಾಂಡ್‌ ಮುಂದಾಗಿತ್ತು… ಈ ಬಾರಿ ಒಕ್ಕಲಿಗರನ್ನು ಬುಟ್ಟಿಗೆ ಹಾಕಿಕೊಂಡು, ರಾಜ್ಯದಲ್ಲಿ ಹಿಂದುತ್ವದ ಗೇಮ್‌ ಪ್ಲ್ಯಾನ್‌ ಮಾಡೋಕೆ ಶುರು ಮಾಡಿತ್ತು.. ಆದ್ರೆ ಅದ್ಯಾಕೋ ವರ್ಕೌಟ್‌ ಆದಂತೆ ಕಾಣುತ್ತಿಲ್ಲ… ಇನ್ನು ಹಳೇ ಮೈಸೂರು ಭಾಗದಲ್ಲಿ ಕನಿಷ್ಠ 80 ಒಕ್ಕಲಿಗ ನಾಯಕರನ್ನು ಬಿಜೆಪಿಗೆ ಸೆಳೆಯಲು ರಾಜ್ಯ ನಾಯಕರಿಗೆ ಟಾಸ್ಕ್‌ ನೀಡಲಾಗಿತ್ತು.. ಅದೂ ಕೂಡಾ ಸೂಕ್ತ ರೀತಿಯಲ್ಲಿ ವರ್ಕೌಟ್‌ ಆಗಿಲ್ಲ.. ಹೀಗಾಗಿ, ಲಿಂಗಾಯತರೂ ಬಿಟ್ಟುಹೋದರೆ ಗೆಲ್ಲೋದು ಕಷ್ಟವಾಗುತ್ತೆ ಅನ್ನೋದು ಬಿಜೆಪಿ ನಾಯಕರಿಗೆ ಅರ್ಥವಾದಂತೆ ಕಾಣುತ್ತಿದೆ… ಹೀಗಾಗಿಯೇ ಯಡಿಯೂರಪ್ಪ ಅವರನ್ನು ಹೊಗಳಿ, ಲಿಂಗಾಯತ ವೋಟ್‌ ಉಳಿಸಿಕೊಳ್ಳಲು ಕೇಂದ್ರ ಬಿಜೆಪಿ ನಾಯಕರು ತೀರ್ಮಾನಿಸಿದಂತೆ ಕಾಣುತ್ತಿದೆ..

ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ… ಆದ್ರೆ ಈ ಬಾರಿಯ ಚುನಾವಣೆಯಲ್ಲಿ ಹಗಲೂ ರಾತ್ರಿ ಪಕ್ಷಕ್ಕಾಗಿ ದುಡಿಯೋದಾಗಿ ಹೇಳಿದ್ದಾರೆ… ಸಾಯೋವರೆಗೂ ಬಿಜೆಪಿಗಾಗಿ ದುಡಿಯುತ್ತೇನೆ ಎಂದು ಹೇಳಿದ್ದಾರೆ… ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೂ ಬಿಎಸ್‌ವೈಗೆ ಸಿಎಂ ಸ್ಥಾನ ಕೊಡುವ ಹಾಗಿಲ್ಲ.. ಹಾಗಂತ, ಹೊಸ ಸಿಎಂ ಅಭ್ಯರ್ಥಿಯನ್ನೂ ಘೋಷಿಸೋದಕ್ಕೆ ಬಿಜೆಪಿ ಹೈಕಮಾಂಡ್‌ಗೆ ಈಗ ಸಾಧ್ಯವಿಲ್ಲ… ಹೀಗಾಗಿಯೇ ಈ ಬಾರಿ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ… ಕೇಂದ್ರದ ನಾಯಕರೇ ಪ್ರಚಾರದ ನಾಯಕತ್ವ ವಹಿಸಿಕೊಳ್ಳುತ್ತಿದ್ದಾರೆ… ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜನಾಥ್‌ ಸಿಂಗ್‌ ಮುಂತಾದವರು ಪದೇ ಪದೇ ರಾಜ್ಯಕ್ಕೆ ಬರಲಿದ್ದಾರೆ… ರಾಜ್ಯದಲ್ಲೂ ಮೋದಿ ವರ್ಚಸ್ಸು ಇದೆಯಾದರೂ, ಅದು ಮತ ತಂದುಕೊಡುವಷ್ಟರ ಮಟ್ಟಿಗೆ ಇಲ್ಲ… ಮೋದಿ ಜೊತೆ ಯಡಿಯೂರಪ್ಪ ಇದ್ದರೆ ಮಾತ್ರ ಇಲ್ಲಿ ಬೆಲೆ.. ಇದು ಕೇಂದ್ರ ಬಿಜೆಪಿ ನಾಯಕರಿಗೆ ಮನವರಿಕೆಯಾಗಿದೆ… ಹೀಗಾಗಿಯೇ ಯಡಿಯೂರಪ್ಪರನ್ನು ಮುಂದಿಟ್ಟುಕೊಂಡು ಚುನಾವಣಾ ಪ್ರಚಾರ ನಡೆಸೋದಕ್ಕೆ ಬಿಜೆಪಿ ಹೈಕಮಾಂಡ್‌ ತೀರ್ಮಾನಿಸಿದಂತೆ ಕಾಣುತ್ತಿದೆ…

ಯಡಿಯೂರಪ್ಪ ಅವರಿಗೆ ತಮ್ಮ ಪುತ್ರ ವಿಜಯೇಂದ್ರರನ್ನು ಸಿಎಂ ಮಾಡಬೇಕೆಂಬ ಬಯಕೆ ಇದೆ… ಆದ್ರೆ ಬಿಜೆಪಿ ಹೈಕಮಾಂಡ್‌ಗೆ ಅದು ಇಷ್ಟವಿಲ್ಲ.. ಅದರ ಬದಲಾಗಿ ಅಚ್ಚರಿಯ ನಾಯಕರೊಬ್ಬರನ್ನು ಸಿಎಂ ಸ್ಥಾನದಲ್ಲಿ ಕೂರಿಸೋ ಇರಾದೆ ಇಟ್ಟುಕೊಂಡಿದೆ… ಆ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ತಂತ್ರಗಾರಿಕೆ ನಡೆಸುತ್ತಿದೆ ಕೂಡಾ… ಹೀಗಾಗಿಯೇ ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿ, ಈ ಬಾರಿ ಚುನಾವಣೆ ಎದುರಿಸೋ ಪ್ರಯತ್ನ ಮಾಡಲಾಗಿತ್ತು… ಆದ್ರೆ ಅದು ಸಾಧ್ಯವಿಲ್ಲ ಅನ್ನೋದು ಅರಿವಾಗಿರಬೇಕು… ಹೀಗಾಗಿ, ಇದೀಗ ಕೇಂದ್ರದ ನಾಯಕರು ಬಿಎಸ್‌ವೈ ಜಪ ಮಾಡುತ್ತಿದ್ದಾರೆ… ಅದು ಯಾವ ರೀತಿಯಲ್ಲಿ ವರ್ಕೌಟ್‌ ಆಗುತ್ತೋ ಗೊತ್ತಿಲ್ಲ…

Share Post