ಡಿ.ಕೆ.ಸುರೇಶ್ ಸೋಲಿಸಲು ಮೆಗಾ ಪ್ಲ್ಯಾನ್; ಅಖಾಡಕ್ಕಿಳಿಯುತ್ತಾರಾ ಡಾ.ಮಂಜುನಾಥ್..?
ಬೆಂಗಳೂರು; ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಡಿ.ಕೆ.ಸುರೇಶ್ ಹಾಲಿ ಸಂಸದರಿದ್ದಾರೆ. ಕರ್ನಾಟಕದಲ್ಲಿ ಇದೊಂದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರೋದು. ಬಜೆಟ್ ಅಧಿವೇಶನದ ನಂತರ ಪ್ರತ್ಯೇಕ ದಕ್ಷಿಣ ಭಾರತದ ಕೂಗೆಬ್ಬಿಸಿದ್ದ ಡಿ.ಕೆ.ಸುರೇಶ್ ಈಗ ದೇಶಾದ್ಯಂತ ಸುದ್ದಿಯಾಗುತ್ತಿದ್ದಾರೆ. ಈ ನಡುವೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಅವರನ್ನು ಸೋಲಿಸೋದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೆಗಾ ಪ್ಲ್ಯಾನ್ ಮಾಡಿವೆ.
ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಪ್ರಯತ್ನ
ಜಯದೇವದಿಂದ ಡಾ.ಸಿ.ಎನ್.ಮಂಜುನಾಥ್ ಅವರು ಇತ್ತೀಚೆಗಷ್ಟೇ ನಿವೃತ್ತಿಯಾಗಿದ್ದಾರೆ. ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ದೇವೇಗೌಡರ ಅಳಿಯನಾಗಿರುವ ಮಂಜುನಾಥ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಜೆಡಿಎಸ್ ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಜೆಡಿಎಸ್ ಮಿತ್ರಪಕ್ಷ ಬಿಜೆಪಿ ನಾಯಕರು ನಮ್ಮ ಪಕ್ಷದಿಂದಲೇ ಮಂಜುನಾತ್ ಅವರನ್ನು ಕಣಕ್ಕಳಿಸುತ್ತೇವೆ ಎಂದು ಹೇಳುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಿ ಡಿ.ಕೆ.ಸುರೇಶ್ ಅವರಿಗೆ ಸೋಲಿಣಿಸೋಕೆ ರಣತಂತ್ರ ರೂಪಿಸಲಾಗುತ್ತಿದೆ. ಆದ್ರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೋದಕ್ಕೆ ಮಂಜುನಾಥ್ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಶೀಘ್ರದಲ್ಲೇ ರಾಜ್ಯಕ್ಕೆ ಬರಲಿರುವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶೀಘ್ರದಲ್ಲೇ ಬೆಂಗಳೂರಿಗೆ ಬರುತ್ತಿದ್ದಾರೆ. ಈ ವೇಳೆ ಅಮಿತ್ ಶಾ ಅವರೇ ಡಾ.ಮಂಜುನಾಥ್ ಅವರ ಮನವೊಲಿಸುವ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಭ್ಯರ್ಥಿಯಾಗಿಯೇ ಮಂಜುನಾತ್ ಅವರನ್ನು ಕಣಕ್ಕಿಳಿಸಿ ಜೆಡಿಎಸ್ ಬೆಂಬಲ ಪಡೆದುಕೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತಿದೆ ಎನ್ನಲಾಗಿದೆ.
ಸೇಡು ತೀರಿಸಿಕೊಳ್ಳಲು ಹೆಚ್ಡಿಕೆ ಪ್ರಯತ್ನ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್‌ನಿಂದ ಕಣಕ್ಕಿಳಿಸಲಾಗಿತ್ತು. ಆದ್ರೆ ನಿಖಿಲ್ ಕುಮಾರಸ್ವಾಮಿ ಹೀನಾಯವಾಗಿ ಸೋತಿದ್ದರು. ಇದಕ್ಕೆ ಕಾರಣ ಡಿಕೆ ಬ್ರದರ್ಸ್. ಹೀಗಾಗಿ ಹೇಗಾದರೂ ಮಾಡಿ ಈ ಬಾರಿ ಡಿ.ಕೆ.ಸುರೇಶಗೆ ಸೋಲುಣಿಸಬೇಕು ಎಂದು ಕುಮಾರಸ್ವಾಮಿ ಪಣ ತೊಟ್ಟಿದ್ದಾರೆ. ಅದಕ್ಕಾಗಿ ಡಾ.ಮಂಜುನಾಥ್ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.