BengaluruCrimeDistricts

ಮನೆಯಲ್ಲೇ ಗಾಂಜಾ ಬೆಳೆಯುತ್ತಿದ್ದ MBBS ವಿದ್ಯಾರ್ಥಿಗಳು ಅರೆಸ್ಟ್‌

ಶಿವಮೊಗ್ಗ; ಎಂಬಿಬಿಎಸ್‌ ವಿದ್ಯಾರ್ಥಿಗಳು ವಾಸವಿದ್ದ ಮನೆಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದಾರೆ. ಶಿವಮೊಗ್ಗದ ಗ್ರಾಮಾಂತರ ಠಾಣೆ ಪೊಲೀಸರು ಐವರು ಎಂಬಿಬಿಎಸ್‌ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾದ ಅಬ್ದುಲ್ ಖಯ್ಯಂ, ಅರ್ಪಿತಾ, ವಿಘ್ನರಾಜ್, ವಿನೋದ್ ಕುಮಾರ್, ಪಾಂಡಿದೊರೈ ಬಂಧಿತ ಆರೋಪಿಗಳಾಗಿದ್ದಾರೆ. ಶಿವಮೊಗ್ಗದ ಶಿವಗಂಗಾ ಲೇಔಟ್ ನಲ್ಲಿ ಅಬ್ದುಲ್ ಖಯ್ಯಂ, ವಿಘ್ನರಾಜ್ ಹಾಗೂ ಅರ್ಪಿತಾ ಮೂವರೂ ಬಾಡಿಗೆ ಮನೆ ಪಡೆದಿದ್ದರು.

ಇದೇ ಮನೆಯಲ್ಲಿ ಹೂವಿನ ಪಾಟ್‌ಗಳನ್ನು ತಂದುಯ ಅದರಲ್ಲಿ ಗಾಂಜಾ ಬೆಳೆದಿದ್ದರು. ಅದನ್ನು ಟೇಬಲ್‌ ಫ್ಯಾನ್‌ ಬಳಸಿ ಅದರ ಗಾಳಿಯಿಂದ ಒಣಗಿಸುತ್ತಿದ್ದರು. ಅನಂತರ ಪ್ಯಾಕೆಟ್‌ಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಪಾಂಡಿದೊರೈ ಹಾಗೂ ವಿನೋದ್‌ ಕುಮಾರ್‌ ಎಂಬುವವರು ಇವರ ಬಳಿ ಗಾಂಜಾ ಖರೀದಿ ಮಾಡಲು ಹೋಗಿದ್ದರು. ಈ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

ಬಂಧಿತರಿಂದ ಆರು ಸಾವಿರ ರೂಪಾಯಿ ಮೌಲ್ಯದ ಹಸಿ ಗಾಂಜಾ, ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ಒಣ ಗಾಂಜಾ, ಮೂವತ್ತು ಸಾವಿರ ರೂಪಾಯಿ ಬೆಲೆಯ ಚರಸ್‌ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೇರೆ ಬೇರೆ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಇವರು ಇಲ್ಲಿ ಎಂಬಿಬಿಎಸ್‌ ಮಾಡುತ್ತಿದ್ದರು. ವೈಭವದ ಜೀವನಕ್ಕಾಗಿ ಗಾಂಜಾ ಬೆಳೆಯುತ್ತಿದ್ದರು ಎಂದು ತಿಳಿದುಬಂದಿದೆ.

Share Post