ಜಮೀನು ವಿಚಾರದಲ್ಲಿ ನಿವೃತ್ತ ಡಿವೈಎಸ್ಪಿ ಮೋಸ ಆರೋಪ; ಟ್ಯಾಂಕ್ ಏರಿದ ಕುಟುಂಬ
ದೊಡ್ಡಬಳ್ಳಾಪುರ; ಜಮೀನು ವಿಚಾರದಲ್ಲಿ ನಿವೃತ್ತ ಡಿವೈಎಸ್ಪಿ ಕೋನಪ್ಪರೆಡ್ಡಿ ಮೋಸ ಮಾಡಿದ್ದಾರೆಂದು ಆರೋಪಿಸಿ ಅವರ ಸಂಬಂಧಿಕರು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೊಂಡವೆನಕಪಲ್ಲಿ ಗ್ರಾಮದ ಆಂಜನೇಯರೆಡ್ಡಿ ಕುಟುಂದ ಸದಸ್ಯರು ನೀರಿನ ಟ್ಯಾಂಕ್ ಏರಿ ಅಲ್ಲಿಂದ ಬೀಳುವುದಾಗಿ ಬೆದರಿಕೆ ಹಾಕಿದ್ದಾರೆ.
ಕೋನಪ್ಪರೆಡ್ಡಿ ಅವರು ನಮಗೆ ಜಮೀನು ವಿಚಾರದಲ್ಲಿ ಮೋಸ ಮಾಡಿದ್ದಾರೆ. ಈ ಬಗ್ಗೆ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಅವರು ಸ್ವೀಕರಿಸುತ್ತಿಲ್ಲ ಎಂದು ಆಂಜನೇಯ ರೆಡ್ಡಿ ಕುಟುಂಬ ಆರೋಪ ಮಾಡಿದೆ. ದೊಡ್ಡಬಳ್ಳಾಪುರದ ಜೆಕೆವಿ ಬಡಾವಣೆಗೆ ಆಗಮಿಸಿರುವ ಕುಟುಂಬ ಅಲ್ಲಿರುವ ಓವರ್ ಹೆಡ್ ಟ್ಯಾಂಕ್ ಏರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದೆ. ಕೋನಪ್ಪ ರೆಡ್ಡಿ ಅವರು ಸ್ಥಳಕ್ಕೆ ಬಂದು ವಿವಾದ ಇತ್ಯರ್ಥದ ಭರವಸೆ ನೀಡುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಇವರು ಪಟ್ಟು ಹಿಡಿದಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರೂ ಆಂಜನೇಯ ರೆಡ್ಡಿ ಕುಟುಂಬಸ್ಥರು ತಮ್ಮ ನಿರ್ಧಾರ ಬದಲಿಸದೆ ಪಟ್ಟುಹಿಡಿದಿದ್ದಾರೆಂದು ತಿಳಿದುಬಂದಿದೆ.