BengaluruNational

ಆನೆ ಸಾಯಿಸಿ ದಂತ ಮಾರಾಟ ಯತ್ನ ಪ್ರಕರಣ; ಆರೋಪಿಗಳ ರಕ್ಷಣೆ ಮಾಡ್ತಿದ್ದಾರಾ ಸಂಸದ ಪ್ರಜ್ವಲ್‌..?

ಬೆಂಗಳೂರು; ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬಿಜೆಪಿ ಸಂಸದೆ ಮನೇಕಾ ಗಾಂಧಿ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿರುವ ಅವರು, ಆನೆ ದಂತ ಮಾರಾಟ ಯತ್ನ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆ ಮಾಡಲು ಪ್ರಜ್ವಲ್‌ ರೇವಣ್ಣ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಹಾಸನ ತಾಲೂಕಿನ ವೀರಾಪುರ ಗ್ರಾಮದಲ್ಲಿ ಅಕ್ರಮವಾಗಿ ವಿದ್ಯುತ್ ಹರಿಸಿ ಸಲಗವನ್ನು ಕೊಂದಿದ್ದ ಆರೋಪಿಗಳಾದ ಚಂದ್ರೆಗೌಡ ಮತ್ತು ಇತರರು ಅದನ್ನು ಹೂತಿದ್ದರು. ಬಳಿಕ ಸತ್ತ ಆನೆಯಿಂದ ದಂತ ಕತ್ತರಿಸಿದ್ದರು. ಈ ದಂತವನ್ನು ಮಾರ್ಚ್‌ 9 ರಂದು ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ವೇಳೆ ಚೆನ್ನಮ್ಮನ ಕೆರೆ ಅಚ್ಚಕಟ್ಟು ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದರು. ಇದೊಂದು ಗಂಭೀರ ಪ್ರಕರಣ. ಹಾಸನ ಅರಣ್ಯ ಇಲಾಖೆ ಕೂಡಾ ಕೇಸ್ ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದೆ. ಆದ್ರೆ ಆರೋಪಿಗಳನ್ನು ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್‌ಎಫ್‌ಒ ಪ್ರಯತ್ನ ಮಾಡಿದ್ದಾರೆ. ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಬಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಮನೇಕಾ ಗಾಂಧಿ ಆರೋಪಿಸಿದ್ದಾರೆ.

ಪದೇ ಪದೇ ಈ ಪ್ರಕರಣವನ್ನು ತಮಗೆ ವರ್ಗಾಯಿಸುವಂತೆ ಬೆಂಗಳೂರಿನ ಸಿ.ಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಅಲ್ಲದೆ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಅವರ ಪಕ್ಷದ ಬೆಂಬಲಿಗರು ಅನ್ನೋ ಕಾರಣಕ್ಕೆ ಅವರ ಪರವಾಗಿ ಸಂಸದರು ಒತ್ತಡ ತರುತ್ತಿದ್ದಾರೆ ಎಂದು ಮನೇಕಾ ಗಾಂಧಿ ದೂರಿದ್ದಾರೆ. ಹೀಗಾಗಿ ಈ ಕೇಸ್ ನಲ್ಲಿ ಸಿಎಂ ಮಧ್ಯ ಪ್ರವೇಶ ಮಾಡಿ ನಿಷ್ಪಕ್ಷಪಾತ ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಸಂಸದೆ ಮನೇಕಾ ಗಾಂಧಿ ಒತ್ತಾಯಿಸಿದ್ದಾರೆ.

ಆದ್ರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರು, ಮನೇಕಾ ಗಾಂಧಿಯವರು ಬಿಜೆಪಿ ಸಂಸದರು. ಅವರದೇ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. ಪ್ರಕರಣದ ಬಗ್ಗೆ ಪೂರ್ತಿ ಮಾಹಿತಿ ಪಡೆಯಬೇಕಾಗಿತ್ತು. ಈ ವಿಚಾರ ತನಗೆ ದಿಶಾ ಸಭೆಯಲ್ಲಿ ಗಮನಕ್ಕೆ ಬಂತು, ಅಲ್ಲೀತನಕ ನನಗೆ ಆನೆ ಮೃತಪಟ್ಟಿರೋದು ನನಗೆ ಗೊತ್ತೇ ಇರಲಿಲ್ಲ. ನಾನು ಈ ಬಗ್ಗೆ ಯಾರ ಮೇಲಾದರೂ ಒತ್ತಡ ಹಾಕಿದ್ದರೆ ಸಾಕ್ಷ್ಯ ಕೊಡಲಿ ಎಂದು ಆಗ್ರಹಿಸಿದ್ದಾರೆ.

Share Post