BengaluruPolitics

ಮೂರು ಬಾರಿ ಸಿಎಂ ಆಗುವ ಅವಕಾಶ ವಂಚಿತರಾದ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು; ರಾಜ್ಯ ವಿಧಾನಸಣಾ ಚುನಾವಣೆ ರಂಗೇರುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕೊಂಚ ಉತ್ತಮ ವಾತಾವರಣವಿದೆ. ಇನ್ನು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ರೇಸ್‌ನಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಇದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಚುನಾವಣೆಯಲ್ಲಿ ಬಹುಮತ ಪಡೆದರೆ ಸಿಎಂ ಸ್ಥಾನಕ್ಕಾಗಿ ಈ ಇಬ್ಬರ ನಡುವೆ ಫೈಟ್‌ ನಡೆಯೋದು ಪಕ್ಕಾ. ಆದ್ರೆ ಕೊನೆಗೆ ಯಾರಾದರೊಬ್ಬರು ತ್ಯಾಗ ಮಾಡಬೇಕಾದ ಪರಿಸ್ಥಿತಿ ಬಂದೇ ಬರುತ್ತೆ. ಅಂದಹಾಗೆ, ಸದ್ಯ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರಿಗೆ ಮೂರು ಬಾರಿ ಸಿಎಂ ಆಗುವ ಅವಕಾಶವಿತ್ತು. ಆದ್ರೆ ಜಾತಿ ಕಾರಣವೋ ಏನೋ ಅವರಿಗೆ ಸಿಎಂ ಸ್ಥಾನ ದಕ್ಕಲೇ ಇಲ್ಲ. 45 ವರ್ಷಗಳಿಂದ ಅವರು ಕಾಂಗ್ರೆಸ್‌ ಪಕ್ಷಕ್ಕೆ ದುಡಿದು, ಸತತವಾಗಿ ಗೆಲ್ಲುತ್ತಾ ಬಂದರೂ ಖರ್ಗೆಯವರಿಗೆ ಸಿಎಂ ಆಗೋದಕ್ಕೆ ಆಗಲಿಲ್ಲ.

ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯದ ಪ್ರಮುಖ ದಲಿತ ನಾಯಕ. 80 ವರ್ಷ ವಯಸ್ಸಿನ ಮಲ್ಲಿಕಾರ್ಜುನ ಖರ್ಗೆಯವರು 1972ರಿಂದಲೂ ಚುನಾವಣಾ ರಾಜಕೀಯದಲ್ಲಿದ್ದಾರೆ. 1980ರಿಂದಲೂ ಅವರು ಕಾಂಗ್ರೆಸ್‌ ಸರ್ಕಾರಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. 1980ರ ಗುಂಡೂರಾವ್‌ ಸರ್ಕಾರದಲ್ಲಿ ಮೊದಲ ಬಾರಿಗೆ ಅವರು ಮಂತ್ರಿಯಾದರು. ಅನಂತರ 1990ರಲ್ಲಿ ಬಂಗಾರಪ್ಪ ಕ್ಯಾಬಿಬೆಟ್‌ನಲ್ಲಿ, 1992ರಲ್ಲಿ ವೀರಪ್ಪ ಮೊಯ್ಲಿ ಕ್ಯಾಬಿನೆಟ್‌ನಲ್ಲಿ ಕೂಡಾ ಮಂತ್ರಿಯಾಗಿದ್ದರು. 1996-99 ಮತ್ತು 2008-09ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. 2005-08ರವರೆಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ನಂತರ 2009 ರಲ್ಲಿ ಅವರು ರಾಷ್ಟ್ರ ರಾಜಕಾರಣಕ್ಕೆ ತೆರಳಿದರು. ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ಈ ನಡುವೆ ಅವರು ಮೂರು ಬಾರಿ ಮುಖ್ಯಮಂತ್ರಿ ರೇಸ್‌ನಲ್ಲಿ ಪ್ರಮುಖರಾಗಿ ಕಾಣಿಸಿಕೊಂಡಿದ್ದರು. 1999, 2004 ಮತ್ತು 2013ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ ಯಾವ ಸಂದರ್ಭದಲ್ಲೂ ಅವರು ಸಿಎಂ ಆಗೋದಕ್ಕೆ ಅವಕಾಶ ಕೂಡಿಬರಲಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಿಎಂ ಸ್ಥಾನ ಒಲಿದುಬರಲಿಲ್ಲ. ಪ್ರತಿ ಬಾರಿಯೂ ಖರ್ಗೆ ನಿರಾಸೆ ಅನುಭವಿಸಬೇಕಾಯಿತು.

1999ರಲ್ಲಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ 132 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿತ್ತು. ಗುರುಮಿಠ್ಕಲ್‌ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿದ್ದ ಖರ್ಗೆ ಪಕ್ಷದಲ್ಲಿ ಹಿರಿಯರಿದ್ದರು. ಸಿಎಂ ಆಗೋದಕ್ಕೆ ಸಮರ್ಥರಿದ್ದರು. ಆದ್ರೆ, ಚುನಾವಣೆ ವೇಳೆ ಪಕ್ಷದ ರಾಜ್ಯಾಧ್ಯರಾಗಿದ್ದವರಿಗೇ ಸಿಎಂ ಸ್ಥಾನ ಅನ್ನೋದು ಕಾಂಗ್ರೆಸ್‌ನ ಅಲಿಖಿತ ನಿಯಮವಾಗಿತ್ತು. ಹೀಗಾಗಿ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಎಸ್‌.ಎಂ.ಕೃಷ್ಣಗೆ ಸಿಎಂ ಸ್ಥಾನ ಒಲಿದುಬಂದಿತ್ತು. ಸದ್ಯ ಎಸ್‌.ಎಂ.ಕೃಷ್ಣ ಅವರು ಬಿಜೆಪಿಯಲ್ಲಿದ್ದಾರೆ.

2004ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 65 ಸ್ಥಾನಗಳನ್ನು ಗೆದ್ದು ಬಹುಮತವನ್ನು ಪಡೆಯಲು ವಿಫಲವಾಯಿತು. ಆಗ ಜೆಡಿಎಸ್‌ 58 ಸ್ಥಾನ ಗಳಿಸಿತ್ತು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಹೆಸರು ಹೆಚ್ಚು ಚಾಲ್ತಿಗೆ ಬಂತು. ಆದ್ರೆ ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಒಮ್ಮತದ ಆಯ್ಕೆಯಾಗಿ ಧರಂಸಿಂಗ್‌ ಆಯ್ಕೆಯಾದರು. ಇದರಿಂದಾಗಿ ಖರ್ಗೆಗೆ ಸಿಎಂ ಸ್ಥಾನ ಕೈತಪ್ಪಿತು. ಆಗ ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಇನ್ನು 2008ರಲ್ಲಿ ಮಲ್ಲಿಕಾರ್ಜುನ ಖರ್ಗೆಯವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆದ್ರೆ ಆ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಗೆದ್ದರೆ, ಕಾಂಗ್ರೆಸ್‌ 80 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಇನ್ನು 2013ರಲ್ಲಿ ಕಾಂಗ್ರೆಸ್‌ 122 ಸ್ಥಾನಗಳಲ್ಲಿ ಗೆದ್ದಿತ್ತು. ಆದ್ರೆ ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ್‌ ಸ್ವತಃ ಸೋತಿದ್ದರು. ಕೊರಟಗೆರೆ ಕ್ಷೇತ್ರದಲ್ಲಿ ಅವರು ಪರಾಭವಗೊಂಡಿದ್ದರು. ಹೀಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಖರ್ಗೆ ಹೆಸರು ಚಾಲ್ತಿಗೆ ಬಂದಿತ್ತು. ಆದ್ರೆ ಹೈಕಮಾಂಡ್‌ ಸಿದ್ದರಾಮಯ್ಯಗೆ ಮಣೆ ಹಾಕಿತು. ಹೀಗಾಗಿ ಆಗಲೂ ಖರ್ಗೆಯವರು ಸಿಎಂ ಸ್ಥಾನದಿಂದ ವಂಚಿತರಾದರು. ಹೀಗೆ ಖರ್ಗೆಯವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಎಂಬ ಸುದ್ದಿಗಷ್ಟೇ ತೃಪ್ತಪಟ್ಟುಕೊಳ್ಳಬೇಕಾಯಿತು. ಅನಂತರ ಅವರು ರಾಷ್ಟ್ರ ರಾಜಕಾರಣಕ್ಕೆ ಹೋದರು. ಸದ್ಯ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ.

Share Post