ಅತಿಥಿ ಉಪನ್ಯಾಸಕರಿಗೆ ಬಂಪರ್; ಮೂರು ಪಟ್ಟು ವೇತನ ಹೆಚ್ಚಳ
ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಕೊನೆಗೂ ಸ್ಪಂದಿಸಿದೆ. ಸಂಕ್ರಾಂತಿ ಹಬ್ಬಕ್ಕೆ ಅತಿಥಿ ಉಪನ್ಯಾಸಕರ ಸಂಬಳ ದುಪ್ಪಟ್ಟು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸಂಬಳವನ್ನು 11 ಸಾವಿರ ರೂಪಾಯಿಯಿಂದ 28 ಸಾವಿರ ರೂಪಾಯಿಗೆ ಏರಿಸಲಾಗಿದೆ. ಇನ್ನು 5 ವರ್ಷಕ್ಕಿಂತ ಹೆಚ್ಚು ಸೇವೆ ಮಾಡಿರುವ, ಯುಜಿಸಿ ಕ್ವಾಲಿಫೈ ಆಗಿರುವ ಉಪನ್ಯಾಸಕರಿಗೆ 13 ಸಾವಿರ ರೂಪಾಯಿಯಿಂದ 32 ಸಾವಿರ ರೂಪಾಯಿಗೆ ಏರಿಸಲಾಗಿದೆ. ಇನ್ನು ಸೆಮಿಸ್ಟರ್‌ವಾರು ನೇಮಕಾತಿಯನ್ನು ನಿಲ್ಲಿಸಿ, ಇನ್ನು ಮುಂದೆ ಇಡೀ ಶೈಕ್ಷಣಿಕ ವರ್ಷಕ್ಕೆ ನೇಮಿಸಿ ಕೊಳ್ಳುವುದಾಗಿ ಘೋಷಿಸಿದೆ.
2002ರಲ್ಲಿ ಮೊದಲ ಬಾರಿಗೆ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಶುರು ಮಾಡಲಾಯಿತು. ಪ್ರತಿ ವರ್ಷ ಅವರನ್ನು ಮರು ನೇಮಕ ಮಾಡಿಕೊಳ್ಳಲಾಗುತ್ತಿದೆ. ಇನ್ನು ಅತಿಥಿ ಉಪನ್ಯಾಸಕರಿಗೆ ತಿಂಗಳಾನುಗಟ್ಟಲೆ ಸಂಬಳ ಬರುತ್ತಿರಲಿಲ್ಲ. ಆದ್ರೆ ಸರ್ಕಾರ ಇದ್ರ ಬಗ್ಗೆಯೂ ಸ್ಪಷ್ಟನೆ ಕೊಟ್ಟಿದ್ದು, ಇನ್ಮೇಲೆ ಪ್ರತಿ ತಿಂಗಳು 10 ರೊಳವೆ ವೇತನ ಪಾವತಿಯಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.