BengaluruPolitics

ಮುನಿಸು, ಮನಸ್ತಾಪ ಬಿಟ್ಟು ಒಟ್ಟಿಗೆ ನಡೆದ ನಾಯಕರು; ಇದೇ ಕಾಂಗ್ರೆಸ್‌ ಗೆಲುವಿಗೆ ಕಾರಣವಾಗುತ್ತಾ..?

ಬೆಂಗಳೂರು; ಚುನಾವಣೆ ಘೋಷಣೆಗೂ ಮುಂಚೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಹಾವು ಮುಂಗಸಿ ತರಾ ಗುದ್ದಾಡುತ್ತಲೇ ಇದ್ದರು. ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದರು. ಇಬ್ಬರ ನಡುವಿನ ಮುನಿಸು ಬಹಿರಂಗವಾಗಿ ಕೂಡಾ ಕಾಣಿಸಿಕೊಳ್ಳುತ್ತಿತ್ತು. ಅಂದ್ರೆ ಎತ್ತಿಗೆ ಏರಿಗೆಳೆದರೆ, ಕೋಣ ನೀರಿಗೆಳೆಯಿತು ಅನ್ನೋ ತರಾ ಇತ್ತು ಇಬ್ಬರ ವರ್ತನೆ. ಆದ್ರೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಇಬ್ಬರೂ ಮುನಿಸು, ಮನಸ್ತಾಪಗಳನ್ನು ಪಕ್ಕಕ್ಕಿಟ್ಟು ಕೆಲಸ ಮಾಡಿದರು. ಇದೇ ಒಗ್ಗಟ್ಟು ಈಗ ಕಾಂಗ್ರೆಸ್‌ ಪಕ್ಷವನ್ನು ದಡ ಸೇರಿಸುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.

ಚುನಾವಣೆಯಲ್ಲಿ ಜನರ ಮುಂದಿಡೋದಕ್ಕೆ ಕಾಂಗ್ರೆಸ್‌ ನಾಯಕರಿಗೆ ಹಲವಾರು ವಿಷಯಗಳಿದ್ದವು. ರಾಜ್ಯ ಬಿಜೆಪಿ ನಾಯಕರ ಬಗ್ಗೆ ಜನರಗೆ ಬೇಸರವೂ ಇತ್ತು. ಆದ್ರೆ ಇದನ್ನು ಎನ್‌ಕ್ಯಾಶ್‌ ಮಾಡಿಕೊಳ್ಳಬೇಕಾದರೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಒಟ್ಟಿಗೆ ಮುನ್ನಡೆಯಬೇಕಾದ ಅವಶ್ಯತೆ ಇತ್ತು. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿದ್ದಿದ್ದರೆ ಚುನಾವಣೆಯಲ್ಲಿ ಫಲಿತಾಂಶ ಬೇರೆಯದೇ ಬರುವ ಸಾಧ್ಯತೆ ಇತ್ತು. ಆದ್ರೆ, ಚುನಾವಣೆಯಲ್ಲಿ ಇಬ್ಬರೂ ನಾಯಕರು ಒಗ್ಗೂಡಿದರು. ಯಾರೇ ಮಾತು ಜಾರಿದರೂ ಅದನ್ನು ಇನ್ನೊಬ್ಬರು ವಿರೋಧ ಮಾಡೋದಕ್ಕೆ ಹೋಗಲಿಲ್ಲ. ಸಮರ್ಥಿಸಿಕೊಂಡರು. ಲಿಂಗಾಯತ ಸಿಎಂ ವಿಚಾರದಲ್ಲಿ ಸಿದ್ದರಾಮಯ್ಯ ಮಾತು ಜಾರಿದ್ದರು. ಆಗಲೂ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಪರವಾಗಿ ನಿಂತು ವಿವಾದಕ್ಕೆ ತೇಪೆ ಹಚ್ಚಿದರು. ಹೀಗೆ ಸಿದ್ದರಾಮಯ್ಯ ಅವರೂ ಡಿ.ಕೆ.ಶಿವಕುಮಾರ್‌ ಪರ ನಿಲ್ಲುವ ಮೂಲಕ ನಾವೆಲ್ಲರೂ ಒಂದು ಅನ್ನೋದನ್ನು ತೋರಿಸುತ್ತಾ ಬಂದರು. ಇದು ಕಾಂಗ್ರೆಸ್‌ಗೆ ಬಲವಾಗಿ ಬದಲಾಗಿದೆ ಎಂದು ಹೇಳಲಾಗುತ್ತಿದೆ.

ಚುನಾವಣೆ ಘೋಷಣೆಗೂ ಮೊದಲು, ಅದರಲ್ಲೂ ರಾಹುಲ್‌ ಗಾಂಧಿಯವರು ಭಾರತ್‌ ಜೋಡೋ ಯಾತ್ರೆ ಶುರು ಮಾಡುವುದಕ್ಕೂ ಮೊದಲು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಇಬ್ಬರ ನಡುವೆಯೂ ವೈಮನಸ್ಯ ಎದ್ದು ಕಾಣುತ್ತಿತ್ತು. ಸುದ್ದಿಗೋಷ್ಠಿಗಳಲ್ಲಿ ಇಬ್ಬರೂ ಮಾತನಾಡುತ್ತಿದ್ದ ರೀತಿಯಲ್ಲೇ ಅವರ ನಡುವೆ ಭಿನ್ನಾಭಿಪ್ರಾಯ ಇರುವುದು ಗೊತ್ತಾಗುತ್ತಿತ್ತು. ಸಿದ್ದರಾಮಯ್ಯ ಅವರು ಏನಾದರೂ ವಿವಾದಿತ ಹೇಳಿಕೆ ನೀಡಿದಾಗ ಡಿ.ಕೆ.ಶಿವಕುಮಾರ್‌ ಸಮರ್ಥಿಸಿಕೊಳ್ಳುತ್ತಿರಲಿಲ್ಲ. ಅವರನ್ನೇ ಕೇಳಿ ಎಂದು ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್‌ ವಿವಾದಿತ ಹೇಳಿಕೆ ನೀಡಿದಾಗ ಸಿದ್ದರಾಮಯ್ಯ ಕೂಡಾ ಹಾಗೆಯೇ ಹೇಳುತ್ತಿದ್ದರು. ಇನ್ನು ಹಲವು ಸಭೆಗಳಲ್ಲಿ ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆಗುವ ಆಸೆ ವ್ಯಕ್ತಪಡಿಸಿದಾಗ ಸಿದ್ದರಾಮಯ್ಯ ಗರಂ ಆಗಿದ್ದುಂಟು. ಸಿದ್ದರಾಮಯ್ಯ ಅವರು ಎಲ್ಲಾದರೂ ಹೋದಾಗ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಘೋಷಣೆ ಕೂಗುತ್ತಿದ್ದರು. ಆಗ ಡಿ.ಕೆ.ಶಿವಕುಮಾರ್‌ ಗರಂ ಆಗುತ್ತಿದ್ದರು. ಜೊತೆಗೆ ಇದ್ದರೂ, ಜೊತೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೂ, ಇಬ್ಬರು ಮಧ್ಯೆ ಒಂದು ಸಣ್ಣ ಮುನಿಸು ಎದ್ದು ಕಾಣುತ್ತಿತ್ತು. ಆದ್ರೆ ಭಾರತ್‌ ಜೋಡೋ ಯಾತ್ರೆ ರಾಜ್ಯಕ್ಕೆ ಬಂದುಹೋದ ಮೇಲೆ ಇಬ್ಬರು ನಾಯಕರ ವರ್ತನೆಯಲ್ಲಿ ಬದಲಾವಣೆ ಬಂತು. ಇಬ್ಬರೂ ನಾಯಕರು ಒಟ್ಟಾಗಿ ಮುನ್ನಡೆದರು.

ಮೊದಲೆಲ್ಲಾ ಡಿ.ಕೆ.ಶಿವಕುಮಾರ್‌ ಬೇರೆ, ಸಿದ್ದರಾಮಯ್ಯ ಅವರು ಬೇರೆಯಾಗಿ ರಾಜ್ಯ ಪ್ರವಾಸ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಇಬ್ಬರಿಗೂ ಸ್ಪಷ್ಟ ಸಂದೇಶ ನೀಡಿದ್ದರು ಎನ್ನಲಾಗಿದೆ. ಜೊತೆಗೆ ದೆಹಲಿಗೂ ಕರೆಸಿಕೊಂಡು ಒಟ್ಟಿಗೆ ಹೋಗಬೇಕೆಂದು ಸೂಚಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಇಬ್ಬರೂ ನಾಯಕರು ಚುನಾವಣೆಯಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಟಿಕೆಟ್‌ ಹಂಚಿಕೆ ವೇಳೆಯೂ ನನ್ನ ಬೆಂಬಲಿಗರಿಗೆ ಕಡಿಮೆಯಾಗಿವೆ, ನಾನು ಹೇಳಿದವರಿಗೆ ಕೊಟ್ಟಿಲ್ಲ ಅನ್ನೋ ಸಣ್ಣ ಮುನಿಸೂ ಇಬ್ಬರಲ್ಲೂ ಕಂಡುಬರಲಿಲ್ಲ. ಎಲ್ಲಿ ಹೋದರೂ ಇಬ್ಬರೂ ಒಂದೇ ಮಾತು, ಒಂದೇ ಘೋಷಣೆ. ಇದು ಚುನಾವಣೆಯಲ್ಲಿ ವರ್ಕೌಟ್‌ ಆದಂತೆ ಕಾಣುತ್ತಿದೆ.

ಚುನಾವಣೆಯಲ್ಲಿ ಸಮಯದಲ್ಲಿ ಸಿಎಂ ಯಾರಾಗ್ತಾರೆ ಅನ್ನೋ ವಿಚಾರದಲ್ಲಿ ಗೊಂದಲಗಳಿದ್ದಿದ್ದರೆ, ಇಬ್ಬರೂ ನಾಯಕರ ಅಭಿಮಾನಿಗಳಲ್ಲಿ ವೈಮನಸ್ಯ ಹುಟ್ಟುತ್ತಿತ್ತು. ಅದು ಮತಗಳು ಚದುರಿಹೋಗಕ್ಕೆ ಕಾರಣವಾಗುತ್ತಿತ್ತು. ಆದ್ರೆ ಇಬ್ಬರೂ ನಾಯಕರು ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಅತ್ಯಂತ ಸೌಹಾರ್ದತೆಯಿಂದ ಇಬ್ಬರೂ ಪ್ರಚಾರ ನಡೆಸಿದರು. ಅಷ್ಟೇ ಅಲ್ಲ, ಮತದಾನಕ್ಕೆ ಇನ್ನು ಎರಡು ದಿನ ಇರುವಾಗ ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡಿದ್ದಾರೆ. ಚರ್ಚೆ ನಡೆಸಿದ್ದಾರೆ. ಅದನ್ನು ರೆಕಾರ್ಡ್‌ ಮಾಡಿಸಿ ಜನರ ಮುಂದಿಟ್ಟಿದ್ದಾರೆ. ನಾಳೆ ಮತದಾನ ಅನ್ನುವಾಗ ಇಬ್ಬರೂ ಒಟ್ಟಿಗೆ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ, ನಾವಿಬ್ಬರೂ ಒಂದೇ ಅನ್ನೋದನ್ನ ಜನರ ಮುಂದೆ ತೋರಿಸಿದ್ದಾರೆ. ಇದು ಕಾರ್ಯಕರ್ತರನ್ನು ಗಟ್ಟಿಗೊಳಿಸಲು ಮತ್ತಷ್ಟು ಪುಷ್ಠಿ ನೀಡಿದೆ. ಈ ಎಲ್ಲಾ ಕಾರಣದಿಂದ ರಾಜ್ಯದಲ್ಲಿ ಮೋದಿ, ಅಮಿತ್‌ ಶಾ ಎಷ್ಟೇ ಪ್ರಚಾರ ಮಾಡಿದರೂ, ಸಿದ್ದರಾಮುಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಜೋಡಿ ಮೋಡಿ ಮಾಡಿದಂತೆ ಕಾಣುತ್ತಿದೆ.

Share Post