Bengaluru

ಜನ ಕೊಟ್ಟೂ ನೋಡ್ತಾರೆ..ಬಿಟ್ಟೂ ನೋಡ್ತಾರೆ: ಡಿಕೆ ಬ್ರದರ್ಸ್‌ ವಿರುದ್ಧ ಹೆಚ್‌ಡಿಕೆ ಟಾಂಗ್‌

ಬೆಂಗಳೂರು: ರಾಮನಗರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್‌ ಮತ್ತು ಡಿ.ಕೆ.ಸುರೇಶ್‌ ವರ್ತನೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಕನಕಪುರ, ರಾಮನಗರ ಯಾರೋಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ ಎಂದು ಕುಟುಕಿದ್ದಾರೆ. ಸರಣಿ ಟ್ವೀಟ್‌ ಮಾಡುತ್ತಾ..

ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ? ಹಾಗಾಗಿ ಅಭಿವೃದ್ದಿ ಮಾತುಗಲಾಡಿ ಜನರಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿರುವ ಗೊತ್ತಿಲ್ಲ ಅಂದುಕೊಂಡಿದ್ದಾರೆ.

ನಾವು ಹಾಸನದಿಂದ ಬಂದಿದ್ದೇವೆ, ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ. ಹೌದು, ಹರದನಹಳ್ಳಿ ನನ್ನ ಜನ್ಮಸ್ಥಳ. ಬಿಡದಿ ನನ್ನ ಕರ್ಮಸ್ಥಳ. ಇದುವೇ ನನ್ನ ಪಾಲಿನ ಧರ್ಮಸ್ಥಳ. ಈ ಮಣ್ಣಲ್ಲಿಯೇ ನಾನು ಮಣ್ಣಾಗುವೆ ಎಂದು ಈಗಾಗಲೇ ಹೇಳಿದ್ದೇನೆ. ಇದರ ಹೊರತಾಗಿ ರಾಮನಗರಕ್ಕೆ ರಿಯಲ್ ಎಸ್ಟೇಟ್ ಮಾಡಲಿಕ್ಕೆ ನಾನು ಬಂದವನಲ್ಲ.

ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ದರ್ಪ, ಧಮ್ಕಿ, ಧಿಮಾಕು ಇನ್ನು ಸಾಕು. ಜನ ಕೊಟ್ಟೂ ನೋಡುತ್ತಾರೆ, ಕೆಲವೊಮ್ಮೆ ಬಿಟ್ಟೂ ನೋಡುತ್ತಾರೆ. ಅನುಭವದಿಂದ ಪಾಠ ಕಲಿತರೆ ಒಳ್ಳೆಯದು. ಉಳಿದದ್ದು ಅವರಿಗೇ ಬಿಟ್ಟಿದ್ದು. ಇನ್ನಾದರೂ ಬುದ್ದಿ ಕಲಿಯಿರಿ ಎಂದು ಟ್ವೀಟ್‌ ಮಾಡಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

Share Post