ಅನೈತಿಕ ರಾಜಕಾರಣದ ಅಸಲಿ ಅಪ್ಪ ಸಿದ್ದರಾಮಯ್ಯ; ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿಯವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ಇಂದೂ ಕೂಡಾ ಕುಮಾರಸ್ವಾಮಿಯವರು ಸರಣಿ ಟ್ವೀಟ್ ಮಾಡಿದ್ದಾರೆ. ಅದ್ರಲ್ಲಿ ಸಿದ್ದರಾಮಯ್ಯ ಅವರನ್ನು ಅನೈತಿಕ ರಾಜಕಾರಣದ ಅಸಲಿ ಅಪ್ಪ ಎಂದು ಜರಿದಿದ್ದಾರೆ.
ಕುಮಾರಸ್ವಾಮಿ ಮಾಡಿರುವ ಟ್ವೀಟ್ನಲ್ಲಿನ ವಿವರ ಇಲ್ಲಿದೆ..
ಆಪರೇಷನ್ ಕಮಲದಿಂದ ನಿಮ್ಮ ಜೇಬು ಸೇರಿದ ಆಕರ್ಷಕ ಅಂಕಿಯ ಹಣದ ಅಸಲೀಯೆತ್ತು ನನಗೂ ಗೊತ್ತು! ನೀವು ರಾಜ್ಯ ಕಂಡ ಗ್ರೇಟ್ ಹಣಕಾಸು ಮಂತ್ರಿ, ಪ್ಲಸ್ಸೂ ಮೈನಸ್ಸಿನ ಪ್ರವೀಣ, ಪರ್ಸಂಟೇಜ್ ಪಿತಾಮಹನಷ್ಟೇ ಅಲ್ಲ.. ಅನೈತಿಕ ರಾಜಕಾರಣದ ಅಸಲಿ ಅಪ್ಪ. ಈಗ ಹೇಳಿ? ಉಂಡ ಮನೆಗೆ ಮೂರು ಬಗೆದ ನೈಜ ಕಳ್ಳ ಯಾರು?
ಮಿಸ್ಟರ್ ಸುಳ್ಳುರಾಮಯ್ಯ.. ದಿನಕ್ಕಿಷ್ಟು ಸುಳ್ಳು, ಕ್ಷಣಕ್ಕೊಂದು ಪೊಳ್ಳು; ಇದು ನಿಮ್ಮ ಜೀವನಶೈಲಿ. ಅದಕ್ಕೇ ನೀವು ರಾಜಕೀಯ ಊಸರವಳ್ಳಿ. ಮೈಯ್ಯಲ್ಲಾ ಸುಳ್ಳನ್ನೇ ಮೆತ್ತಿಕೊಂಡು ಕಂಡೋರ ಮೇಲೆ ಸಿಡಿಸುವ ನಿಮ್ಮ ʼಸಿದ್ದಸೂತ್ರʼಕ್ಕೆ ಕೊನೆಗಾಲ ಹತ್ತಿರದಲ್ಲೇ ಇದೆ.
ನಾವು ಜಲಧಾರೆ ಮಾಡುತ್ತಿದ್ದೇವೆ, ನಿಜ. ನೀರಾವರಿ ಯೋಜನೆಗಳ ಬಗ್ಗೆ ನಮಗೆ ಸ್ಪಷ್ಟತೆ ಇದೆ. ಈ ರಾಜ್ಯಕ್ಕೆ ಹೆಚ್.ಡಿ.ದೇವೇಗೌಡರು ಕೊಟ್ಟ ಕೊಡುಗೆ ಕಣ್ಮುಂದೆಯೇ ಇದೆ. 1962ರಿಂದ ಅವರು ನಡೆಸಿದ ಹೊರಾಟದ ಬಗ್ಗೆ ತಿಳಿದು ಮಾತನಾಡಿ. ಅರಿವುಗೆಟ್ಟ ಹೇಳಿಕೆ ಕೊಟ್ಟು ಅಪಹಾಸ್ಯಕ್ಕೆ ಗುರಿಯಾಗಬೇಡಿ.
ಮಂಡ್ಯದಲ್ಲಿ ಜೆಡಿಎಸ್ ಬಗ್ಗೆ ಸುಳ್ಳು ಹೇಳಿದ್ದೀರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ನಿಮ್ಮ 5 ವರ್ಷಗಳ ದುರಾಡಳಿತದಲ್ಲಿ ಆ ಜಿಲ್ಲೆಯೊಂದರಲ್ಲೇ 200 ರೈತರು ಆತ್ಮಹತ್ಯೆಗೆ ಶರಣಾದರು. ಮೈಷುಗರ್ ಕಾರ್ಖಾನೆ ಮುಚ್ಚಿಸಿ ಕಬ್ಬು ಬೆಳೆಗಾರರ ಮನೆ ಹಾಳು ಮಾಡಿದಿರಿ. ಮರೆತುಬಿಟ್ಟಿರಾ ಸುಳ್ಳುರಾಮಯ್ಯ?
ಮಂಡ್ಯದಲ್ಲಿ ಏಳೂ ಸೀಟು ಸಿಗಲಿಲ್ಲ ಎಂದು ಜನರ ಮುಂದೆ ಹಲುಬುತ್ತೀರಿ. 200 ಅನ್ನದಾತರ ಜೀವಕ್ಕೆ ಎರವಾಗಿ, ಇಡೀ ಜಿಲ್ಲೆಯಲ್ಲಿ ಮರಣಮೃದಂಗ ಭಾರಿಸಿದ ನಿಮ್ಮ ರೈತವಿರೋಧಿ ನೀತಿಗಳು ಕಸಿದ ಜೀವಗಳ ಲೆಕ್ಕವೆಲ್ಲಾ ಚುಕ್ತಾ ಆಗುವ ಕಾಲ ಬಂದಿದೆ. ಜೀವ ತೆಗೆಯುವ ಜವರಾಯನ ಅವತಾರವೇ ನೀವಾಗಿರುವಾಗ ನಮ್ಮ ಕಣ್ಣೀರನ್ನು ಹಂಗಿಸುತ್ತೀರಿ.