Bengaluru

ಟಿಪ್ಪು ಸುಲ್ತಾನ್‌ ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿಲ್ಲ; ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು: ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ ಮೈಸೂರು ಹುಲಿ ಎಂಬ ವಿಚಾರವನ್ನು ಕೈ ಬಿಟ್ಟಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಾಸಕ ಅಪ್ಪಚ್ಚು ರಂಜನ್ ಅವರು ಟಿಪ್ಪು ಸುಲ್ತಾನ್‌ ಪಾಠವನ್ನು ಕೈಬಿಡಿ ಎಂದು ಮನವಿ ಮಾಡಿದ್ದಾರೆ. ಇದಕ್ಕಾಗಿ ಸಾಕ್ಷಿ ಸಹಿತ ಬೇಡಿಕೆ ಇಟ್ಟಿದ್ದಾರೆ‌.  ಟಿಪ್ಪು ಸುಲ್ತಾನ್‌ ಕುರಿತ ಪಾಠವನ್ನು ಕೈಬಿಡದೇ ಹೋದರೆ, ಅವರ ಎಲ್ಲ ಮುಖ ತೋರಿಸಿ. ಕೊಡಗಿನಲ್ಲಿ ದೌರ್ಜನ್ಯ ಮಾಡಿರುವ ವಿಷಯವನ್ನೂ ಪಠ್ಯದಲ್ಲಿ ಅಳವಡಿಸಿ ಎಂದು ಆಗ್ರಹಿಸಿದ್ದಾರೆ. ಆದರೆ, ಟಿಪ್ಪು ವಿಚಾರಗಳನ್ನು ಪಠ್ಯದಿಂದ ಕೈಬಿಟ್ಟಿಲ್ಲ. ಮೈಸೂರು ಹುಲಿ ಎಂಬ ಅಂಶವನ್ನು ಕೂಡಾ ಸದ್ಯಕ್ಕೆ ಕೈಬಿಟ್ಟಿಲ್ಲ. ಆದ್ರೆ  ಅನಗತ್ಯ ಅಂಶಗಳನ್ನು ಕೈಬಿಡಲಾಗುವುದು. ಯಾವ ಅಂಶವನ್ನು ಕೈಬಿಡಲಾಗುವುದು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.

  ಇನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಪಠ್ಯದಲ್ಲಿ ನೈತಿಕ ಶಿಕ್ಷಣ ಅಳವಡಿಸುತ್ತಿದ್ದೇವೆ.  ಭಗವದ್ಗೀತೆ, ಪಂಚತಂತ್ರ ಕಥೆಗಳು, ಮಹಾಭಾರತ ಎಲ್ಲವೂ ಶಾಲಾ ಪಠ್ಯದ ಭಾಗವಾಗಿರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಇದೇ ಸಂದರ್ಭದಲ್ಲಿ ತಿಳಿಸಿದರು. ಪಠ್ಯವನ್ನು ಯಾವುದೇ ಧರ್ಮಕ್ಕೆ ಸೀಮಿತ ಮಾಡಲ್ಲ. ಯಾವ ಉತ್ತಮ ಅಂಶ ನಮ್ಮ ಮಕ್ಕಳಿಗೆ ಒಳ್ಳೆಯದು ಮಾಡುತ್ತದೆಯೋ ಅದು ಯಾವುದೇ ಧರ್ಮದ್ದಾಗಿರಲಿ, ಅದನ್ನು ಅಳವಡಿಕೆ ಮಾಡುತ್ತೇವೆ ಎಂದೂ ಸಚಿವರು ಇದೇ ವೇಳೆ ಸ್ಪಷ್ಟನೆ ನೀಡಿದಾರೆ.

ಆದರೆ, ಯಾವ ಧರ್ಮದ ಮಕ್ಕಳು ಹೆಚ್ಚಿನ‌ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವಂತಹ ವಿಚಾರಗಳನ್ನು ಅಳವಡಿಸುತ್ತೇವೆ. 90% ಮಕ್ಕಳು ಯಾರು ಇರುತ್ತಾರೋ ಆ ಧರ್ಮದ ಅಂಶಗಳು ಹೆಚ್ಚು ಇರುತ್ತವೆ. ಇದು ಅನಿವಾರ್ಯ ಕೂಡಾ ಎಂದು ಸಚಿವರು ಹೇಳಿದ್ದಾರೆ.

Share Post