ಶೀಘ್ರದಲ್ಲೇ KSRTC ಯಿಂದ 8,600 ಸಿಬ್ಬಂದಿ ನೇಮಕ; ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು; ಕೆಎಸ್‌ಆರ್‌ಟಿಸಿ ಉದ್ಯೋಗ ಮಾಡಬೇಕು ಎಂದುಕೊಂಡಿದ್ದವರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಹಿ ಸುದ್ದಿ ನೀಡಿದ್ದಾರೆ. ಕೆಎಸ್ಆರ್ಟಿಸಿಯಿಂದ ಶೀಘ್ರದಲ್ಲೇ 8,600 ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
2016ರಿಂದ ಕೆಎಸ್‌ಆರ್‌ಟಿಸಿಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಅಂದಿನಿಂದ 3,888 ಸಿಬ್ಬಂದಿ ನಿವೃತ್ತರಾಗಿದ್ದಾರೆ. ಹೀಗಾಗಿ, ಸಿಬ್ಬಂದಿ ನೇಮಕ ಆಗಬೇಕಿದೆ. ಕೆಎಸ್‌ಆರ್‌ಟಿಸಿಯಲ್ಲಿ 13 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಆದ್ರೆ ಮೊದಲ ಹಂತವಾಗಿ, 8,600 ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತೇವೆ. ಅದಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ.
ಶಾಲಾ ಮಕ್ಕಳು ಹೆಚ್ಚು ಓಡಾಡುವ ಮಾರ್ಗಗಳಿಗೆ ಹೆಚ್ಚುವರಿ ಬಸ್ ಹಾಕಲು ಚಿಂತನೆ ನಡೆಯುತ್ತಿದೆ. ಹೀಗಾಗಿ ಹೊಸ ಬಸ್‌ಗಳ ಖರೀದಿಗೂ ಮುಂದಾಗಿದ್ದೇವೆ. ಅಪಘಾತದಲ್ಲಿ ಮೃತಪಟ್ಟ ಸಾರಿಗೆ ಸಿಬ್ಬಂದಿಗೆ ವಿಮೆ ಪರಿಹಾರ ಮೊತ್ತವನ್ನು 2 ರಿಂದ 3 ಲಕ್ಷದಿಂದ 4 ರಿಂದ 10 ಲಕ್ಷಕ್ಕೆ ಏರಿಕೆ ಮಾಡಿದ್ದೇವೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಬೇಕೆಂಬ ಬಹುದಿನಗಳ ಬೇಡಿಕೆಯನ್ನೂ ಈಡೇರಿಸುವ ಚಿಂತನೆ ಇದೆ ಎಂದಿದ್ದಾರೆ.