ಬಂದ್ ಮುಂದೂಡಲು ಒಪ್ಪದ ವಾಟಾಳ್: ಕನ್ನಡ ಒಕ್ಕೂಟದಲ್ಲಿ ಭಿನ್ನಮತ
ಬೆಂಗಳೂರು: ಎಂಇಎಸ್ ನಿಷೇಧ ಮಾಡಬೇಕೆಂದು ಆಗ್ರಹಿಸಿ ನಾಳೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಆದ್ರೆ ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ. ಮೆರವಣಿಗೆ ಕೂಡಾ ನಡೆಸುವ ಹಾಗೆ ಇಲ್ಲ ಎಂದು ಈಗಾಗಲೇ ಸೂಚನೆ ನೀಡಲಾಗಿದೆ. ಈ ನಡುವೆಯೇ ಕನ್ನಡ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ, ಅದೂ ವರ್ಷದ ಕೊನೆಯ ದಿನ ಬಂದ್ ಬೇಡ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಕೆಲ ಕನ್ನಡ ಪರ ಹೋರಾಟಗಾರರು ಡಿಸೆಂಬರ್ ೩೧ಕ್ಕೆ ಬಂದ್ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮಾತ್ರ ಇದಕ್ಕೆ ಒಪ್ಪುತ್ತಿಲ್ಲ. ಹೀಗಾಗಿ, ಲಾಲ್ ಬಾಗ್‌ನಲ್ಲಿ ಸಂಧಾನ ಮಾತುಕತೆ ನಡೆಯುತ್ತಿದೆ.
ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ನಿನ್ನೆಯೇ ಬಂದ್‌ಗೆ ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. ಜೊತೆಗೆ ವಾಟಾಳ್ ನಾಗರಾಜ್ ಅವರ ಜೊತೆ ಮಾತನಾಡಿ, ಬಂದ್ ಮುಂದೂಡುವ ಬಗ್ಗೆ ತೀರ್ಮಾನಿಸುತ್ತೇನೆ ಎಂದು ಹೇಳಿದ್ದರು. ಇತ್ತ ಮತ್ತೊಬ್ಬ ಕನ್ನಡ ಹೋರಾಟಗಾರ ಕೆ.ಆರ್.ಕುಮಾರ್ ಕೂಡಾ ಬಂದ್ ಬೇಡ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇಬ್ಬರೂ ಲಾಲ್ ಬಾಗ್‌ನಲ್ಲಿ ವಾಟಾಳ್ ನಾಗರಾಜ್ ಅವರನ್ನು ಭೇಟಿ ಮಾಡಿ, ನಾಳೆ ಬಂದ್ ಬೇಡ. ಬೇರೊಂದು ದಿನ ಮಾಡೋಣ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಪ್ರವೀಣ್ ಅವರು ವಾಟಾಳ್ ಅವರ ಕಾಲಿಗೆ ನಮಸ್ಕಾರ ಮಾಡಿ ಮನವಿ ಮಾಡಿದ್ದಾರೆ. ಆದ್ರೆ, ವಾಟಾಳ್ ನಾಗರಾಜ್ ಮಾತ್ರ ನಾಳೆ ಬಂದ್ ಮಾಡಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಎಷ್ಟು ಹೇಳಿದರೂ ಒಪ್ಪದಿದ್ದಕ್ಕೆ ಕೆ.ಆರ್.ಕುಮಾರ್ ಅವರು ವಾಟಾಳ್ ಮೇಲೆ ಕೋಪ ಮಾಡಿಕೊಂಡು ಹೋದ ಘಟನೆಯೂ ನಡೆದಿದೆ. ಆದರೆ ಮಧ್ಯಪ್ರವೇಶಿಸಿದ ಪ್ರವೀಣ್ ಶೆಟ್ಟಿಯವರು, ಮತ್ತೆ ಕೆ.ಆರ್.ಕುಮಾರ್ ಅವರನ್ನು ಕರೆತಂದು ಸಂಧಾನ ನಡೆಸಿದರು. ಆದರೆ, ಯಾವುದೇ ಒಮ್ಮತ ಮೂಡಿಲ್ಲ.