Karnataka Bandh; ಕಾವೇರಿ ಸಮಸ್ಯೆ ಬಗ್ಗೆ ಚಿತ್ರರಂಗದ ಗಣ್ಯರು ಹೇಳಿದ್ದೇನು..?
ಬೆಂಗಳೂರು; ಕಾವೇರಿಗಾಗಿ ಚಿತ್ರರಂಗ ಇಂದು ಪ್ರತಿಭಟನೆ ಮಾಡಿತು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಿತ್ರರಂಗದ ಗಣ್ಯರು ಮಾತನಾಡಿದರು. ಅವರು ಏನು ಹೇಳಿದ್ದರು..? ಇಲ್ಲಿದೆ ಮಾಹಿತಿ
ಶ್ರೀಮುರಳಿ
ಕಾವೇರಿ ವಿಚಾರದಲ್ಲಿ ಯಾರೂ ಕೂಡಾ ರಾಜಕೀಯ ಮಾಡಬಾರದು. ನಾಡು, ನುಡಿ, ಗಡಿ, ಜಲ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ. ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಪ್ರಯತ್ನ ಎಂದಿಗೂ ಸಹಿಸುವುದಿಲ್ಲ.
ಜೋಗಿ ಪ್ರೇಮ್
ಕಾವೇರಿ ಹೆಸರಲ್ಲಿ ಮತ ಪಡೆದು, ಕತ್ತು ಕುಯ್ಯುವ ಕೆಲಸ ಆಗ್ತಿದೆ. ನಾನು ಹುಟ್ಟಿದ್ದು ಮಂಡ್ಯ ಜಿಲ್ಲೆಯಲ್ಲಿ. ನಾವೂ ಕೂಡಾ ರೈತರ ಮಕ್ಕಳೆ. ಇವಾಗಲು ಎಮ್ಮೆ, ದನ ಸಾಕುತ್ತಿದ್ದೇವೆ. ದೇವರು ನಮ್ಮ ಮಂಡ್ಯ ಜಿಲ್ಲೆಗೆ ಹೋರಾಟದ ಶಾಪ ಕೊಟ್ಟಿದ್ದಾನೆ. ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ನೀರು ಬಿಟ್ಟಿಲ್ಲ, ಇವರೂ ಕೂಡಾ ನೀರು ಬಿಡಬಾರದಾಗಿತ್ತು. ಲೋಕಸಭಾ ಚುನಾವಣೆ ಬರ್ತಿದೆ. ರಾಜಕೀಯ ಮಾಡುತ್ತಾರೆ. ರೈತರ ಜೊತೆ ನಾವು ಸದಾ ಇರುತ್ತೇವೆ.
ರಂಗಾಯಣ ರಘು
ನಮ್ಮಲೇ ನೀರಿಲ್ಲ. ಆದ್ರೆ ಅವರಿಗೆ ಹೇಗೆ ನೀರು ಕೊಡೋದು. ಪ್ರಜಾಪ್ರಭುತ್ವ ಬಂದರೂ ಇನ್ನೂ ನಮಗೆ ನ್ಯಾಯ ಸಿಕ್ಕಿಲ್ಲ. ಸಮಸ್ಯೆ ಇನ್ನೂ ಇತ್ಯರ್ಥವಾಗಿಲ್ಲ.
ವಿಜಯ ರಾಘವೇಂದ್ರ
ನಾವು, ನೀವು ಎಷ್ಟೇ ಧೈರ್ಯ ಹೇಳಿದರೂ ರೈತರಿಗೆ ಮಳೆಯಿಂದ ಪರಿಹಾರ ಸಿಗಬೇಕು. ಸರ್ಕಾರಗಳು ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳಬೇಕು. ಈ ಸಮಸ್ಯೆಗೆ ಪರಿಹಾರ ಸಿಗುತ್ತಾ ಅನ್ನೋ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕು.
ನಟಿ ಪೂಜಾಗಾಂಧಿ
ಕನ್ನಡಿಗರು ಸ್ನೇಹ, ಸಹಬಾಳ್ವೆಯಿಂದ ಇದ್ದೇವೆ. ಈ ನಾಡಿಗೆ ಚೆನ್ನಾಗಿ ಮಳೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕನ್ನಡಿಗರು ತುಂಬಾ ತಾಳ್ಮೆ ಇರುವವರು. ನಮ್ಮ ತಾಳ್ಮೆಯನ್ನು ಪರೀಕ್ಷಿಸಬಾರದು. ಮೇಕೆದಾಟು ಎಷ್ಟು ಅವಶ್ಯಕ ಅನ್ನೋದನ್ನು ಯೋಚಿಸಬೇಕು.
ಹಂಸಲೇಖ
ನೀರಿನ ಸಮಸ್ಯೆ 10ನೇ ಶತಮಾನದಿಂದಲೂ ಇದೆ. ಸಮಸ್ಯೆ ಬಗೆಹರಿಸುವ ಬಗ್ಗೆ ಸ್ಕ್ರಿಪ್ಟ್ ಕೊಡಿ. ಕಾವೇರಿ ವಿಚಾರವಾಗಿ ಒಂದು ಚಿತ್ರ ಮಾಡಿ. ಸಂಸತ್ ಇದೆ, ನಾಡಿನ ಸಂಪತ್ ಇದೆ. ಇದರ ಮೇಲೆ ಜಲ ಇದೆ. ಸಂಸತ್ತಿನಲ್ಲಿ ಮಾತ್ರ ಇದಕ್ಕೆ ಪರಿಹಾರ ಸಾಧ್ಯ. ಸಿನಿಮಾ, ಕಲೆ ಮೂಲಕ ಸರ್ಕಾರಕ್ಕೆ ನಾವು ಅರ್ಥ ಮಾಡಿಸಬೇಕು. ಜಲ ಎನ್ನುವ ಚಿತ್ರ ನಿರ್ಮಾಣ ಆಗಬೇಕು.