Bengaluru

Karnataka Bandh; ಬೆಳಗ್ಗೆಯಿಂದಲೇ ಏನೆಲ್ಲಾ ನಡೀತು..?

ಬೆಂಗಳೂರು; ಕಾವೇರಿಗಾಗಿ ಕರ್ನಾಟಕ ಬಂದ್‌ ಬಹುತೇಕ ಯಶಸ್ವಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಉಳಿದೆಡೆ ಬಾಗಶಃ ಬಂದ್‌ ಆಗಿತ್ತು. ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದರಿಂದ ಪ್ರತಿಭಟನೆಗಳು, ಮೆರವಣಿಗೆಗಳು ನಡೆಯದಂತೆ ತಡೆಯಲಾಯಿತು. ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಆದ್ರೆ ಪೊಲೀಸರು ಇದಕ್ಕೆ ಆಸ್ಪದ ಕೊಡಲಿಲ್ಲ. ಟೌನ್‌ಹಾಲ್‌ಗೆ ಬರುವ ಮೊದಲೇ ಹೋರಾಟಗಾರರಾದ ವಾಟಾಳ್‌ ನಾಗರಾಜ್‌, ಪ್ರವೀಣ್‌ ಶೆಟ್ಟಿ ಮುಂತಾದವರನ್ನು ಬಂಧಿಸಲಾಯಿತು. ಎಲ್ಲರನ್ನೂ ತಂದು ಫ್ರೀಡಂ ಪಾರ್ಕ್‌ನಲ್ಲಿ ತಂದು ಬಿಡಲಾಯಿತು. ಹೋರಾಟಗಾರರೆಲ್ಲಾ ಸೇರಿ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ಇನ್ನೊಂದೆಡೆ ಕನ್ನಡ ಚಿತ್ರರಂಗ ಕೂಡಾ ಬಂದ್‌ಗೆ ಬೆಂಬಲ ನೀಡಿತು. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಬಳಿ ಧರಣಿ ನಡೆಸಲಾಯಿತು. ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು. ದರ್ಶನ್‌, ಉಪೇಂದ್ರ ಸೇರಿದಂತೆ ನೂರಾರು ಕಲಾವಿದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾವು ಪ್ರತಿ ಬಾರಿ ಕಾವೇರಿ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ಹತ್ತಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಪ್ರಯೋಜನವೇನು..? ಹೋರಾಟಕ್ಕಿಂತ ಮುಖ್ಯವಾಗಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕು ಎಂದು ನಟ ಶಿವರಾಜ್‌ಕುಮಾರ್‌ ಆಗ್ರಹ ಮಾಡಿದರು.

ಇನ್ನು ರಾಜ್ಯದ ಬಹುತೇಕ ಕಡೆ ಬಂದ್‌ಗೆ ಉತ್ತಮ ಬೆಂಬಲ ಸಿಕ್ತು. ಬಸ್‌ ಸಂಚಾರ ತುಂಬಾನೇ ವಿರಳವಾಗಿತ್ತು. ಅಂಗಡಿಗಳು ಕೂಡಾ ಅಲ್ಲಲ್ಲಿ ತೆಗೆದಿದ್ದವು. ಕೆಲ ಪ್ರತಿಭಟನಾಕಾರರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನುಗ್ಗಿ ಪ್ರತಿಭಟನೆ ಮಾಡಲು ಮುಂದಾದರು. ಅವರನ್ನು ಪೊಲೀಸರು ಬಂಧಿಸಿದರು. ಇನ್ನು ರಾಮನಗರದಲ್ಲಿ ಪ್ರತಿಭಟನಾಕಾರನೊಬ್ಬ ಕೈ ಕುಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಇಷ್ಟು ಬಿಟ್ಟರೆ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಎಲ್ಲಾ ಕಡೆ ಬಂದ್‌ ಶಾಂತುಯುತವಾಗಿ ನಡೆಯಿತು.

ಇನ್ನೊಂದೆಡೆ ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಿತು. ಈ ಸಭೆಯಲ್ಲೂ ಕರ್ನಾಟಕಕ್ಕೆ ತೀವ್ರ ಹಿನ್ನಡೆಯಾಗಿದೆ. ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಮಂಗಳವಾರ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿದ್ದ ಆದೇಶವನ್ನು ಪಾಲಿಸುವಂತೆ ಸಿಡಬ್ಲ್ಯುಎಂಎ ಸೂಚನೆ ನೀಡಿದೆ. ಇದರೊಂದಿಗೆ ಕರ್ನಾಟಕ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಒಂದೆಡೆ, ಕಾವೇರಿ ನೀರು ಬಿಡುಗಡೆ ಖಂಡಿಸಿ ಕರ್ನಾಟಕ ಬಂದ್ ನಡೆಯುತ್ತಿರುವ ಮಧ್ಯೆಯೇ ಈ ಆದೇಶ ಹೊರಬಿದ್ದಿದೆ.

ಈ ನಡುವೆ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಸ್ತಾಂಶ ಮುಂದಿಟ್ಟರೂ ಹಿನ್ನಡೆಯಾಗುತ್ತಿದೆ ಎಂದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಂದು ಸಿಡಬ್ಲ್ಯೂಎಂಎ ಸಭೆ ಇತ್ತು. ನಾವು ಇದರ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಲು ಸಾಧ್ಯವಾ ಅಂತಾ ಕಾನೂನು ತಜ್ಞರ ತಂಡದ ಜೊತೆ ಕೇಳಿದ್ದೇನೆ. ಇಂದು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್​ಗಳ ಜೊತೆ ಸಭೆ ಕರೆದಿದ್ದೇನೆ. ಅನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಬಂದ ಮೇಲೆ ಪ್ರತಿಭಟನಾಕಾರರು ಮತ್ತಷ್ಟು ಕೆರಳಿದ್ದಾರೆ. ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಸೂಚನೆ ಹಿನ್ನೆಲೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಕಾವೇರಿ ಪ್ರಾಧಿಕಾರದ ಆದೇಶಕ್ಕೆ ಮಣಿದು ನೀರು ಹರಿಸಿದ್ರೆ ಮತ್ತೆ ಹೇಗೆಲ್ಲ ಹೋರಾಟ ಮಾಡಬೇಕು ಎಂದು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಸಭೆ ನಡೆಸಲಾಯಿತು.

ಇನ್ನೊಂದೆಡೆ ವಾಟಾಳ್‌ ನಾಗರಾಜ್‌ ಅವರು ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Share Post