Bengaluru

ತಜ್ಞರ ಸಭೆಯಲ್ಲಿ‌‌‌ ನಿರ್ಧಾರವಾಗಿದ್ದೇನು..?; ಸಿಎಂ ಏನು ಹೇಳಿದ್ರು?

ಬೆಂಗಳೂರು; ತಮಿಳುನಾಡಿಗೆ ಅಕ್ಟೋಬರ್​​ 15ರ ವರೆಗೆ ದಿನ ನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೂಚಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ತಜ್ಞರ ಜತೆ ಸಭೆ ನಡೆಸಿದರು. ಸಭೆಯ ನಂತರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ನೀರಾವರಿ ವಿವಾದಗಳಿಗೆ ಸಂಬಂಧ ಸಲಹಾ ಸಮಿತಿ ರಚನೆಗೆ ಸಲಹೆ ತಜ್ಞರು ಸಲಹೆ ನೀಡಿದ್ದಾರೆ. ಮಹದಾಯಿ, ಕಾವೇರಿ, ಕೃಷ್ಣಾ ಜಲ ವಿವಾದದಲ್ಲಿ ಸಲಹೆ ನೀಡಲು ಸಮಿತಿ ರಚಿಸುವಂತೆ ಸೂಚಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಲಹಾ ಸಮಿತಿಯು ಪ್ರತಿದಿನ ಡೇಟಾ ಸಂಗ್ರಹಿಸಿ ರಾಜ್ಯದ ಕಾನೂನು ತಂಡಕ್ಕೆ ಸಲಹೆ ನೀಡಬೇಕು. ಕಾವೇರಿ ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಮುಂದೆ ವಾಸ್ತವಾಂಶಗಳನ್ನು ವಿವರಿಸಲಾಗಿದೆ. ಇಷ್ಟೆಲ್ಲ ಮಾಹಿತಿ ನೀಡಿದರೂ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದ್ದಾರೆ. ಈ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತಜ್ಞರು ಸಲಹೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡುವಂತೆ ಸಭೆಯಲ್ಲಿ ತಜ್ಞರು ಸಲಹೆ ನೀಡಿದ್ದಾರೆ. ಸುಪ್ರೀಂಕೋರ್ಟ್​ ಜೊತೆ ಮಾತನಾಡಿ ಮನವೊಲಿಸುವಂತೆ ಸಲಹೆ ನೀಡಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಿಸುವುದರಿಂದ ತಮಿಳುನಾಡಿಗೆ ಸಮಸ್ಯೆಯಾಗಲ್ಲ. ತಮಿಳುನಾಡಿಗೆ ಮನವರಿಕೆ ಮಾಡಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಮೇಕೆದಾಟು ಯೋಜನೆ ಜಾರಿಯಾದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ತಮಿಳುನಾಡುಗೆ ಅಗತ್ಯವಿದ್ದಾಗ ನೀರು ಹರಿಸಲು ಸಹಕಾರಿಯಾಗಲಿದೆ. ಜಲವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ಹರಿದುಹೋಗಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Share Post