ಕಲ್ಯಾಣ ಮಿತ್ರ ಸಹಾಯವಾಣಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರ ಕಲ್ಯಾಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಹಲವು ಯೋಜನೆಗಳ ಮಾಹಿತಿಯನ್ನು ಒಂದೇ ಸೂರಿನಡಿ ಒದಗಿಸುವ “ಕಲ್ಯಾಣ ಮಿತ್ರ” ಸಹಾಯವಾಣಿ ಸಂಖ್ಯೆ 9482300400 ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ “ಕಲ್ಯಾಣ ಮಿತ್ರ”(ಏಕೀಕೃತ ಎಸ್.ಸಿ./ಎಸ್.ಟಿ. 24/7 ಸಹಾಯವಾಣಿ) ಉದ್ಘಾಟನೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ, ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಂ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಿಸಲು ಅಧಿಕಾರಿಗಳು, ನೌಕರರು ವಿಳಂಬ ಧೋರಣೆ ತೋರದೆ, ಪ್ರಾಮಾಣಿಕವಾಗಿ, ಪಾರದರ್ಶಕವಾಗಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಇತ್ತೀಚೆಗೆ ಎಸ್.ಸಿ./ಎಸ್.ಸಿ. ಫಲಾನುಭವಿಗಳಿಗೆ ಭೂ ಒಡೆತನ ಯೋಜನೆಯಡಿ ಭೂಮಿ ಖರೀದಿಯ ಮೊತ್ತವನ್ನು ರೂ. 15 ಲಕ್ಷಗಳಿಂದ ರೂ. 20 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಮನೆ ನಿರ್ಮಾಣದ ವೆಚ್ಚವನ್ನು ರೂ. 1.75 ಲಕ್ಷದಿಂದ ರೂ. 2 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಎಸ್.ಸಿ./ಎಸ್.ಸಿ. ರೈತರಿಗೆ 75 ಯೂನಿಟ್‌ಗಳ ವಿದ್ಯುತ್‌ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಇಂತಹ ಹಲವಾರು ಯೋಜನೆಗಳನ್ನು ದೀನದಲಿತರ ಅಭಿವೃದ್ಧಿಗಾಗಿ ಸರ್ಕಾರವು ಜಾರಿಗೊಳಿಸಿದ್ದು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಿ, ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುವಂತೆ ಕಾರ್ಯಾಂಗದಲ್ಲಿ ಕಾರ್ಯನಿರ್ವಹಿಸುವವರು ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಬೇಕು ಎಂದು ತಿಳಿಸಿದರು.