ಪಿಎಸ್‌ಐ ನೇಮಕಾತಿ ಹಗರಣ; ಏನಿದು ಝೀರೋ ಝೀರೋ ಕೋಡ್..?
ಬೆಂಗಳೂರು; ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಆರೋಪದ ಮೇಲೆ ಬಂಧಿತರಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಅವರಿಗೆ ಬೇನಾಮಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದ ಶಂಬುಲಿಂಗಸ್ವಾಮಿ ನಡುವೆ ಹಣಕಾಸಿನ ವ್ಯವಹಾರದಲ್ಲಿದ್ದ ‘ಡಬಲ್ ಝೀರೋ’ ಕೋಡ್ನ್ನು ಸಿಐಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪರೀಕ್ಷಾ ನೇಮಕಾತಿ ಜಾಲದಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 35ನೇ ಆರೋಪಿಯಾಗಿರುವ ಅಮೃತ್ ಪಾಲ್ ವಿರುದ್ಧ 1,406 ಪುಟಗಳ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಸಿಐಡಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಆಭ್ಯರ್ಥಿಗಳಿಂದ ಪಡೆದ ಹಣವನ್ನು ಯಾರಿಗೂ ತಿಳಿಯದಂತೆ ವ್ಯವಹಾರ ನಡೆಸಬೇಕು ಎಂಬುದರ ಬಗ್ಗೆ ಅಮೃತ್ ಪಾಲ್ ಶಂಬುಲಿಂಗಸ್ವಾಮಿಯೊಂದಿಗೆ ಮಾತುಕತೆ ನಡೆಸಿದ್ದರು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.
ಯಾವ್ಯಾವ ಅಭ್ಯರ್ಥಿಗಳು ಎಷ್ಟು ಹಣ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಕಂಪ್ಯೂಟರ್ನಲ್ಲಿ ನಮೂದಿಸಿದ್ದ ಶಂಬುಲಿಂಗ, ಅಕ್ರಮ ಹಣದ ಬಗ್ಗೆ ಯಾರಿಗೂ ಗೊತ್ತಾಗದಿರಲು ಪಾಲ್ ಜೊತೆ ಕೋಡ್ ವರ್ಡ್ ಇಟ್ಟುಕೊಂಡಿದ್ದರು. ಉದಾಹರಣೆಗೆ ಅಭ್ಯರ್ಥಿಯೋರ್ವ 10 ಲಕ್ಷ ನೀಡಿದರೆ ಶಂಬುಲಿಂಗ ಎಂಟ್ರಿ ಮಾಡಿಕೊಳ್ಳುತ್ತಿದ್ದುದ್ದು ಕೇವಲ 10 ಸಾವಿರ ಮಾತ್ರ. 5 ಲಕ್ಷ ನೀಡಿದರೆ 5 ಸಾವಿರ ಮಾತ್ರ ಬರೆದುಕೊಳ್ಳುತ್ತಿದ್ದರು ಎಂದು ಸಿಐಡಿ ಮೂಲಗಳು ತಿಳಿಸಿವೆ.