BengaluruPolitics

ಸಿದ್ದರಾಮಯ್ಯಗೆ ನಿಜವಾಗ್ಲೂ ಕೋಲಾರ ಸೇಫಾ..?; ಮಾಜಿ ಸಿಎಂಗೆ ಶುರುವಾಗಿದೆ ತಿಕ್ಕಾಟ

ಬೆಂಗಳೂರು; ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಿ ಐದು ವರ್ಷ ಸಂಪೂರ್ಣ ಆಡಳಿತ ನಡೆಸಿದವರು. ಅಹಿಂದ ಸಂಘಟನೆ ಮಾಡಿ ದೊಡ್ಡ ನಾಯಕರೆನಿಸಿಕೊಂಡವರು. 75 ನೇ ಹುಟ್ಟುಹಬ್ಬ ಆಚರಿಸಿಕೊಂಡಾಗ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳವಷ್ಟು ಜನರನ್ನು ಸೇರಿಸಿದವರು. ಇಷ್ಟೆಲ್ಲಾ ಇದ್ದರೂ ಅವರಿಗೆ ಅಂತ ರಾಜ್ಯದಲ್ಲಿ ಒಂದು ಕ್ಷೇತ್ರವಿಲ್ಲ. ಯಾವ ಕ್ಷೇತ್ರದಲ್ಲಿ ನಿಂತರೂ ಸೋಲುತ್ತೇನೆ ಎಂಬ ಭಯ ಕಾಡುತ್ತಿದೆಯೋ ಏನೋ. ಹೀಗಾಗಿ ಇನ್ನೂ ಅವರ ಕ್ಷೇತ್ರ ಫೈನಲ್‌ ಆಗುತ್ತಿಲ್ಲ. ಕೊನೆಯದಾಗಿ ಕೋಲಾರದ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆಯಾದರೂ ಅದೂ ಕೂಡಾ ಅಂತಿಮ ಕ್ಷಣದಲ್ಲಿ ಏನಾಗುತ್ತೋ ಗೊತ್ತಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಹಾಗೂ ಬದಾಮಿ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಚಾಮುಂಡೇಶ್ವರಿ ಜಿ.ಟಿ.ದೇವೇಗೌಡರ ವಿರುದ್ಧ ಹೀನಾಯವಾಗಿ ಸೋತರು. ಬದಾಮಿಯಲ್ಲಿ ಶ್ರೀರಾಮುಲು ವಿರುದ್ಧ ಕೇವಲ ಸಾವಿರ ಚಿಲ್ಲರೆ ಮತಗಳಿಂದ ಗೆದ್ದಿದ್ದರು. ಇದೀಗ ಬದಾಮಿಯಲ್ಲಿ ಕ್ಷೇತ್ರ ಬಿಟ್ಟುಕೊಟ್ಟಿದ್ದ ಚಿಮ್ಮನಕಟ್ಟಿ ತಮಗೆ ಕ್ಷೇತ್ರ ಬೇಕು ಅಂತಿದ್ದಾರೆ. ಜೊತೆಗೆ ಈ ಬಾರಿ ಅಲ್ಲೂ ಗೆಲ್ಲೋದು ಕಷ್ಟ ಅನಿಸಿತೋ ಏನೋ, ದೂರ ಇದೆ ಎಂಬ ಕಾರಣ ನೀಡಿ ಸಿದ್ದರಾಮಯ್ಯ ಹತ್ತಿರದ ಕ್ಷೇತ್ರಗಳನ್ನು ಹುಡುಕುತ್ತಿದ್ದಾರೆ.

ಪ್ರತಿ ಬಾರಿಯೂ ಅವರು ನನಗೆ ಹತ್ತಾರು ಕ್ಷೇತ್ರಗಳಿಂದ ಆಹ್ವಾನ ಬಂದಿದೆ ಎಂದು ಲಿಸ್ಟ್‌ ಕೊಡುತ್ತಾ ಬಂದಿದ್ದಾರೆ. ಆದ್ರೆ ಎಲ್ಲಿ ಸ್ಪರ್ಧೆ ಮಾಡಬೇಕು ಅನ್ನೋದನ್ನ ಮಾತ್ರ ಇನ್ನೂ ಫೈನಲ್‌ ಮಾಡಿಕೊಂಡಿಲ್ಲ. ಇನ್ನೇನು ನಾಲ್ಕೈದು ತಿಂಗಳ ಎಲೆಕ್ಷನ್‌ ಬರ್ತಾ ಇದೆ. ಈಗಲಾದರೂ ಕ್ಷೇತ್ರ ಅಂತಿಮ ಮಾಡಬೇಕು. ಆದ್ರೆ ಈಗಲೂ ಸಿದ್ದರಾಮಯ್ಯ ಗೊಂದಲದಲ್ಲಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಈಗ ಆಯ್ಕೆ ಅಂತ ಇರೋದು ವರುಣಾ, ಚಾಮರಾಜಪೇಟೆ ಹಾಗೂ ಕೋಲಾರ ಕ್ಷೇತ್ರಗಳು. ವರುಣಾ ತವರು ಕ್ಷೇತ್ರವಾದ್ದರಿಂದ ಗೆಲ್ಲುವ ನಿರೀಕ್ಷೆಗಳು ಸಾಕಷ್ಟಿವೆ. ಆದ್ರೆ, ಮಗ ಯತೀಂದ್ರ ಅಲ್ಲಿ ಸದ್ಯ ಶಾಸಕರಾಗಿದ್ದಾರೆ. ಕ್ಷೇತ್ರ ಬಿಟ್ಟು ಕೊಡುತ್ತೇನೆ ಅಂತ ಯತೀಂದ್ರ ಹೇಳುತ್ತಿದ್ದಾರಾದರೂ, ಸಿದ್ದರಾಮಯ್ಯ, ಮಗನ ಕ್ಷೇತ್ರ ಕಿತ್ತುಕೊಳ್ಳಲು ಮನಸು ಒಪ್ಪುತ್ತಿಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಬಾರಿ ನಿಂತರೂ ಗೆಲ್ಲೋದು ಕಷ್ಟದ ಮಾತೇ. ಹೀಗಾಗಿ ಆ ಕ್ಷೇತ್ರದ ಹೆಸರು ಸಿದ್ದರಾಮಯ್ಯ ಅವರ ಮನಸು ಮನಸಿನಲ್ಲೂ ಇಲ್ಲ.

ಇನ್ನು ಚಾಮಪರಾಜ ಪೇಟೆಯಲ್ಲಿ ಮುಸ್ಲಿಮರ ಮತಗಳು ಹೆಚ್ಚಿವೆ. ಸಿದ್ದರಾಮಯ್ಯ ಬಂದರೆ ಕ್ಷೇತ್ರ ಬಿಟ್ಟುಕೊಡಲು ಜಮೀರ್‌ ಅಹ್ಮದ್‌ ಖಾನ್‌ ಸಿದ್ಧವಿದ್ದಾರೆ. ಆದ್ರೆ ಈ ಕ್ಷೇತ್ರದಲ್ಲಿ ನಿಂತರೆ ಸಿದ್ದರಾಮಯ್ಯಗೆ ಮುಸ್ಲಿಂ ಪರ ಅನ್ನೋ ಮುದ್ರೆ ಖಾಯಂ ಆಗಿಬಿಡುತ್ತೆ. ಹೀಗಾಗಿ ಅಲ್ಲೂ ನಿಲ್ಲೋದಕ್ಕೆ ಅವರು ಮನಸು ಮಾಡುತ್ತಿಲ್ಲ. ಬೇರೆ ಯಾವುದಾದರೂ ಕ್ಷೇತ್ರವಿದೆಯಾ ಎಂದು ನೋಡಿದಾಗ ಅವರಿಗೆ ಸಿಕ್ಕಿರೋದು ಕೋಲಾರ ಕ್ಷೇತ್ರ.

ಕೋಲಾರ ಕ್ಷೇತ್ರದಲ್ಲಿ ಹಿಂದುಳಿದವರು, ಕುರುಬರು ಹಾಗೂ ದಲಿತ ಸಮುದಾಯದವರು ಹೆಚ್ಚಿದ್ದಾರೆ. ಆದ್ರೆ ಇಲ್ಲಿ ಕುರುಬ ಮತಗಳು ವಿಭಜನೆಯಾಗಲಿವೆ. ಯಾಕಂದ್ರೆ ಬಿಜೆಪಿಯಿಂದ ಕುರುಬ ನಾಯಕ ವರ್ತೂರ್‌ ಪ್ರಕಾಶ್‌ ಸ್ಪರ್ಧೆಯಲ್ಲಿದ್ದಾರೆ. ಇನ್ನು ದಲಿತ ಮತಗಳು ಸಿಗುತ್ತವೆ ಅಂದ್ರೆ ಅದೂ ಕಷ್ಟವೇ. ಯಾಕಂದ್ರೆ, ದಲಿತ ನಾಯಕ ಕೆ.ಎಚ್‌.ಮುನಿಯಪ್ಪ ಕಳೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಅದಕ್ಕೆ ಸಿದ್ದರಾಮಯ್ಯ ಕುಮ್ಮಕ್ಕೇ ಕಾರಣ ಎಂಬ ಆರೋಪವಿದೆ. ಆ ಬಗ್ಗೆ ಕೆ.ಎಚ್‌.ಮುನಿಯಪ್ಪ ಕೂಡಾ ಮುನಿಸಿಕೊಂಡಿದ್ದಾರೆ. ಹೀಗಾಗಿ ಅವರು ಸಿದ್ದರಾಮಯ್ಯಗೆ ಬೆಂಬಲ ಕೊಡೋದು ಅನುಮಾನ. ಅವರು ಬೆಂಬಲ ನೀಡದೇ ಇದ್ದರೆ, ಇಲ್ಲವೇ ಜೊತೆಗಿದ್ದುಕೊಂಡೇ ವಿರೋಧಿಗಳ ಪರ ಕೆಲಸ ಮಾಡಿದರೆ ಸಿದ್ದರಾಮಯ್ಯಗೆ ಕಷ್ಟವಾಗಬಹುದು.

ಇನ್ನೊಂದೆಡೆ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದು, ದೇವೇಗೌಡರನ್ನು ಸೋಲಿಸಿದ್ದು ಎರಡೂ ಸಿದ್ದರಾಮಯ್ಯ ಅವರೇ ಎಂಬ ಕೋಪ ಜೆಡಿಎಸ್‌ ನಾಯಕರಿಗಿದೆ. ಹೀಗಾಗಿ ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ಈ ಬಾರಿ ಸೋಲಿಸಬೇಕೆಂದು ಕುಮಾರಸ್ವಾಮಿಯವರು ಪಣ ತೊಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದು ಕುಮಾರಸ್ವಾಮಿ ಕೂಡಾ ಇದನ್ನು ಗಂಭೀರವಾಗಿ ತೆಗೆದುಕೊಂಡರೆ ಸಿದ್ದರಾಮಯ್ಯಗೆ ಈ ಬಾರಿಯ ಚುನಾವಣೆಯೂ ಕಷ್ಟದ ಕೆಲಸವಾಗುತ್ತದೆ. ಹೀಗಾಗಿಯೇ ಈಗಲೂ ಸಿದ್ದರಾಮಯ್ಯ ಗೊಂದಲದಲ್ಲಿಯೇ ಇದ್ದಾರೆ.

Share Post