ಉಕ್ರೇನ್ನಿಂದ ಬಂದ ಕನ್ನಡಿಗರನ್ನು ಅವರ ಊರುಗಳಿಗೆ ಕಳುಹಿಸಲು ಸರ್ಕಾರ ನೆರವು : ಸಿಎಂ
ಬೆಂಗಳೂರು: ಮುಂಬೈ ಅಥವಾ ದಿಲ್ಲಿಗೆ ಇಂದು ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತಂದು ಅವರವರ ಊರುಗಳಿಗೆ ಕಳುಹಿಸಲು ಸಹಾಯ ಸಹಕಾರವನ್ನು ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ದಿಲ್ಲಿಯಲ್ಲಿರುವ ಮುಖ್ಯ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಲಾಗಿದೆ. ಉಕ್ರೇನ್ನಿಂದ ಬರುವವರಿಗೆ ಸಾರಿಗೆ ಹಾಗೂ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗಿದೆ ಎಂದರು.
ಕನ್ನಡಿಗ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳುವ ಬಗ್ಗೆ ನಿನ್ನೆ ಕೇಂದ್ರ ವಿದೇಶಾಂಗ ಸಚಿವ ಜಯಶಂಕರ್ ಅವರೊಂದಿಗೆ ಮಾತನಾಡಿದ ನಂತರ ಅವರ ಪಟ್ಟಿಯನ್ನು ಸಹ ಕಳುಹಿಸಿಕೊಡಲಾಗಿದೆ. ಪಶ್ಚಿಮ ಭಾಗದಲ್ಲಿರುವವರನ್ನು ರಸ್ತೆ ಮುಖಾಂತರ ಕಳುಹಿಸುವುದು ಎಂದು ತೀರ್ಮಾನಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಖಾರಖೈ ಎಂಬಲ್ಲಿದ್ದಾರೆ. ಅದು ಈಶಾನ್ಯ ಭಾದಲ್ಲಿದ್ದು,ಅವರಿಗೆ ಸುರಕ್ಷಿತ ಸ್ಥಳದಲ್ಲಿರಲು ಸೂಚಿಸಲಾಗಿದೆ. ನಮ್ಮ ಪ್ರಧಾನ ಮಂತ್ರಿಗಳು ರಷ್ಯಾದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಭಾರತೀಯರನ್ನು ಸ್ಥಳಾಂತರ ಮಾಡಲು ಇರುವ ವಿಮಾನಗಳಿಗೆ ಸುರಕ್ಷಿತ ಮಾರ್ಗವನ್ನು ಮಾಡಿಕೊಡುವಂತೆ ಕೋರಿದ್ದಾರೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಯುದ್ಧದ ವಾತಾವರಣ ನಿಯಂತ್ರಣಕ್ಕೆ ಬಂದ ಮೇಲೆ ಆ ಪ್ರಕ್ರಿಯೆ ಕೂಡ ಪ್ರಾರಂಭವಾಗಲಿದೆ. ಕೆಲವೇ ದಿನಗಳಲ್ಲಿ ರಸ್ತೆ ಹಾಗೂ ವಿಮಾನಗಳ ಮೂಲಕ ನಮ್ಮ ವಿದ್ಯಾರ್ಥಿಗಳನ್ನು ಕರೆತರಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ ಸಿಎಂ
“ನಾನೂ ಸಹ ಕೆಲವು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ್ದೇನೆ. ವಿಚಾರಗಳನ್ನು ತಿಳಿಸಿ ಸಂಪರ್ಕಿಸುವ ಸಂಖ್ಯೆಗಳನ್ನು ಒದಗಿಸಲಾಗಿದೆ. ಮಾಹಿತಿಗಳನ್ನು ಪಡೆದು ಧೈರ್ಯ ಹೇಳಿದ್ದೇನೆ. ರಷ್ಯಾ ಅಧ್ಯಕ್ಷ ರೊಂದಿಗೆ ನಮ್ಮ ಪ್ರಧಾನಿಗಳು ಮಾತನಾಡಿರುವ ಫಲಶ್ರುತಿಯಿಂದ ಭಾರತೀಯರು ಮತ್ತು ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿ ಕರೆತರಲಾಗುವುದು ಎಂದರು.