ಮತದಾರರ ಮಾಹಿತಿ ಸಂಗ್ರಹ ಮಾಡಲು ಖಾಸಗಿ ಸಂಸ್ಥೆಗೆ ಅಕ್ರಮ ಅನುಮತಿ; ಕಾಂಗ್ರೆಸ್ ಗಂಭೀರ ಆರೋಪ
ಬೆಂಗಳೂರು; ಬಿಬಿಎಂಪಿ ಚುನಾವಣೆ ಗೆಲ್ಲಲು ಸಿಎಂ ಬೊಮ್ಮಾಯಿ ಹೊಸ ಆಟ ಶುರು ಮಾಡಿದ್ದು, ಖಾಸಗಿ ಸಂಸ್ಥೆ ಮೂಲಕ ಮತದಾರರ ಮಾಹಿತಿ ಸಂಗ್ರಹ ಮಾಡಲಾಗುತ್ತಿದ್ದು, ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಮತದಾರರ ಮಾಹಿತಿ ಸಂಗ್ರಹಿಸಲು ಅನುಮತಿ ನೀಡಿದ್ದಾರೆ. ಇದು ಕಾನೂನು ಬಾಹಿರ ಎಂದು ಆರೋಪ ಮಾಡಿದ್ದಾರೆ.
ಸರ್ಕಾರಿ ಅಧಿಕಾರಿಗಳು ಮಾತ್ರ ಮತದಾರರ ಮಾಹಿತಿ ಸಂಗ್ರಹ ಮಾಡೋದಕ್ಕೆ ಅವಕಾಶ ಇದೆ. ಆದ್ರೆ ಕಾನೂನನ್ನು ಗಾಳಿಗೆ ತೂರಿ ಆ 20 ರಂದು ಯಾವುದೇ ನೋಟಿಫಿಕೇಷನ್ ಇಲ್ಲದೆ ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನ ಮತದಾರರ ಮಾಹಿತಿ ಸಂಗ್ರಹಕ್ಕೆ ಅನುಮತಿ ನೀಡಲಾಗಿದೆ. ಇದನ್ನು ದುರುಪಯೋಗ ಮಾಡಿಕೊಳ್ಳಲುವ ಹುನ್ನಾರದಿಂದಲೇ ಮಾಡಿರೋದು. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿಯವರ ಕುತಂತ್ರ ಎಂದು ಆರೋಪ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು, ಸರ್ಕಾರ ಎಲ್ಲರೂ ಸೇರಿ ಮಾಡಿರುವ ಸಂಚಿದು. ಬಿಬಿಎಂಪಿ ಚುನಾವಣೆಗೆ ಗೆಲ್ಲೋದಕ್ಕೆ ಬೊಮ್ಮಾಯಿಯವರು ಮಾಡಿರುವ ಹೊಸ ಆಟ ಇದು. ಇದು ಐಪಿಸಿ ಪ್ರಕಾರ ಗಂಭೀರ ಅಪರಾಧವಾಗಿದೆ. ಹೀಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನ ನಡೆಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಆ ಸಂಸ್ಥೆ ಇದನ್ನು ದುರುಪಯೋಗ ಮಾಡಿಕೊಂಡಿದೆ. ತನ್ನ ಏಜೆಂಟರಿಗೆ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ. ತನ್ನ ಖಾಸಗಿ ಏಜೆಂಟರ ಐಡಿ ಕಾರ್ಡ್‌ಗಳಲ್ಲಿ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು ಎಂದು ಉಲ್ಲೇಖ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಂದೀಪ್ ಸರ್ಜೇವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಪರಮೇಶ್ವರ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.