ಮೆಟ್ರೋದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ನಡೆಸಿದ್ರೆ ಬೀಳುತ್ತೆ ದಂಡ!!
ಬೆಂಗಳೂರು; ಮೆಟ್ರೋ ರೈಲಿನಲ್ಲಿ ಯೂಟ್ಯೂಬರ್‌ಗಳು ರೀಲ್ಸ್ ಮಾಡುತ್ತಾ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಇಂತಹವರಿಗೆ ಮೆಟ್ರೋ ಸಂಸ್ಥೆ ಪಾಠ ಕಲಿಸಲು ಮುಂದಾಗಿದೆ. ಮೆಟ್ರೋದಲ್ಲಿ ಹುಚ್ಚಾಟ ಮಾಡಿ, ರೀಲ್ಸ್ ಮಾಡಿದ್ದ ಯುವಕನನ್ನು ಪತ್ತೆ ಹಚ್ಚಿರುವ ಪೊಲೀಸರು, ಆತನಿಗೆ 500 ರೂಪಾಯಿ ದಂಡ ವಿಧಿಸಿದ್ದಾರೆ.
ಬಂಡೆಪಾಳ್ಯದ ಗೆದ್ದನಹಳ್ಳಿಯ ನಿವಾಸಿ ಸಂತೋಷ್ ಕುಮಾರ್ ಯೂಟ್ಯೂಬ್ ಚಾನಲ್ ನಡೆಸುತ್ತಾನೆ. ಈತ ಡಿಸೆಂಬರ್ 24 ರಂದು ಮೆಟ್ರೋ ರೈಲಿನಲ್ಲಿ ರೀಲ್ಸ್ ಮಾಡಿ ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದ. ಜೊತೆಗೆ ಇನ್ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಕೂಡಾ ಮಾಡಿದ್ದ.
ಇನ್ಸ್ಟಾಗ್ರಾಂ ಅಪ್‌ಲೋಡ್ ಮಾಡಿದ್ದ ವಿಡಿಯೋ ಆಧರಿಸಿ ಉಪ್ಪಾರ ಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆರೋಪಿಯನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆಸಿ, 500 ರೂಪಾಯಿ ದಂಡ ವಿಧಿಸಿ ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ.