ಇನ್ನೆಷ್ಟು ಜೀವಗಳು ಬಲಿಯಾದರೆ ಕಣ್ಣುಬಿಡುತ್ತೀರಿ..?; ಸಿಎಂಗೆ ಸಿದ್ದರಾಮಯ್ಯ ಪ್ರಶ್ನೆ
ಬೆಂಗಳೂರು; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಣ್ಣು ಬಿಟ್ಟು ನೋಡೋದಕ್ಕೆ ಇನ್ನೂ ಎಷ್ಟು ಬಲಿಯಾಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ಪಿಂಚಣಿಗಾಗಿ ಮುಷ್ಕರ ನಡೆಸಿದ್ದ ಇಬ್ಬರು ನಿವೃತ್ತ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅನುದಾನಿತ ಶಾಲಾ-ಕಾಲೇಜು ಶಿಕ್ಷಕರ ಸಂಘದಿಂದ ಮುಷ್ಕರದಲ್ಲಿ ಇಬ್ಬರು ನಿವೃತ್ತ ಶಿಕ್ಷಕರು ಭಾಗಿಯಾಗಿದ್ದರು. ಬಾಗಲಕೋಟೆ ಮೂಲದ ಶಿಕ್ಷಕ ಸಿದ್ದಯ್ಯ ಹಿರೇಮಠ ಮತ್ತು ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಶಂಕರಪ್ಪ ಬೋರಡ್ಡಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆದ್ರೆ ಸರ್ಕಾರ ಹೋರಾಟಕ್ಕೆ ಸ್ಪಂದಿಸದ ಕಾರಣ ಇಬ್ಬರೂ ಆತ್ಮಹತ್ಯೆ ಶರಣಾಗಿದ್ದಾರೆ. ಇದನ್ನು ಸರ್ಕಾರಿ ಕೊಲೆಗಳು ಅನ್ನದೇ ಮತ್ತಿನ್ನೇನಂತ ಕರೀಬೇಕು ಅಂತ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಳೆದ 141 ದಿನಗಳಿಂದ ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಮುಷ್ಕರ ನಡೆಸುತ್ತಿದ್ದಾರೆ. ಆದ್ರೆ ಅವರ ಗೋಳು ಕೇಳುವವರೇ ಇಲ್ಲ. ಶಿಕ್ಷಕರು ಕೇಳುತ್ತಿರುವುದು ತಮ್ಮ ಹಕ್ಕಿನ ಪಿಂಚಣಿಯನ್ನು ಎಂಬ ಕನಿಷ್ಠ ಜ್ಞಾನವಾದರೂ ಬಿಜೆಪಿ ಸರ್ಕಾರಕ್ಕೆ ಬೇಡವೇ.? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.