BengaluruBusinessInternationalLifestyleNational

ಟೊಮ್ಯಾಟೋ ಭಾರತಕ್ಕೆ ಬಂದಿದ್ಹೇಗೆ..?; ಒಂದು ಕಾಲದಲ್ಲಿ ಟೊಮ್ಯಾಟೋ ತಿಂದ್ರೆ ಸಾಯ್ತೀವಿ ಅಂತಿದ್ರು ಜನ..!

ಬೆಂಗಳೂರು;  ಮಾರುಕಟ್ಟೆಯಲ್ಲಿ ಟೊಮ್ಯಾಟೋ ಬೆಲೆ ಶತಕ ದಾಟಿದೆ. ಸದ್ಯ ಟೊಮ್ಯಾಟೋ ಇಲ್ಲದೆ ಯಾವ ಅಡುಗೆಯೂ ಪೂರ್ಣವಾಗುವುದಿಲ್ಲ ಅನ್ನೋ ಮಟ್ಟಿಗೆ ಟೊಮ್ಯಾಟೋ ಬೇಡಿಕೆ ಗಳಿಸಿಕೊಂಡಿದೆ. ಹೀಗಾಗಿ ಬೆಲೆ ಎಷ್ಟೇ ಏರಿಕೆಯಾದರೂ ಜನ ಟೊಮ್ಯಾಟೋ ಖರೀದಿ ಮಾಡದೇ ವಿಧಿ ಇಲ್ಲ. ಆ ಮಟ್ಟಿಗೆ ಟೊಮ್ಯಾಟೋ ಭಾರತೀಯರ ಅಗತ್ಯ ವಸ್ತುವಾಗಿದೆ. ಅಂದಹಾಗೆ ಟೊಮ್ಯಾಟೋ ಭಾರತದ್ದಲ್ಲ. ಅದು ಬೇರೆ ದೇಶದಿಂದ ಆಮದಾದದ್ದು. ಅದು ಭಾರತಕ್ಕೆ ಬಂದಿದ್ದೇ ಒಂದು ರೋಚಕ. ಇನ್ನು ಟೊಮ್ಯಾಟೋವನ್ನು ಮೊದಲು ಜನ ತಿನ್ನೋದಕ್ಕೇ ಭಯಪಡ್ತಿದ್ದರು. ಟೊಮ್ಯಾಟೋವನ್ನು ತಿಂದರೆ ಸಾಯ್ತೀವಿ ಅನ್ನೋ ಭ್ರಮೆ ಕೂಡಾ ಜನರಲ್ಲಿತ್ತು. ಆದ್ರೆ ಅದೆಲ್ಲವನ್ನೂ ಮೀರಿ ಟೊಮ್ಯಾಟೋ ಎಲ್ಲರಿಗೂ ಬೇಕಾದ ತರಕಾರಿಯಾಗಿದೆ. ಜೊತೆಗೆ ಇದನ್ನು ಹಣ್ಣಿನ ಪಟ್ಟಿಯಲ್ಲೂ ಗುರುತಿಸಲಾಗುತ್ತದೆ.

ಟೊಮ್ಯಾಟೋ ನಮ್ಮ ಜೀವನದ ಭಾಗವಾಗಿದ್ದೇಗೆ..? ಭಾರತಕ್ಕೆ ಇದನ್ನು ತಂದವರು ಯಾರು..?

ನಾವೆಲ್ಲಾ ಕೆಂಪಗಿನ ಈ ತರಕಾರಿಯನ್ನು ಟೊಮ್ಯಾಟೋ ಎಂದು ಕರೆಯುತ್ತೇವೆ. ಆದ್ರೆ ಇದರ ವೈಜ್ಞಾನಿಕ ಹೆಸರು ಸೋಲಾನಮ್ ಲೈಕೋಪರ್ಸಿಕಮ್. ಇದು ಸೊಲನೇಸಿ ಕುಟುಂಬದ ಹಣ್ಣು.  ಟೊಮ್ಯಾಟೋ ಶೇಕಡಾ 95 ರಷ್ಟು ನೀರು ಹೊಂದಿದ್ದರೆ, ಶೇಕಡಾ 5 ರಷ್ಟು ಮ್ಯಾಲಿಕ್, ಸಿಟ್ರಿಕ್ ಆಮ್ಲಗಳು, ಗ್ಲುಟಮೇಟ್‌ಗಳು, ವಿಟಮಿನ್ ಸಿ ಮತ್ತು ಲೈಕೋಪೀನ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ. ಟೊಮ್ಯಾಟೊ ಕೆಂಪಾಗಿರಲು ಕಾರಣವೇ ಈ ಲೈಕೋಪೀನ್.

‘ಟೊಮ್ಯಾಟೋ’ ಎಂಬ ಇಂಗ್ಲಿಷ್ ಪದವು ‘ಟೊಮೇಟ್’ ಎಂಬ ಸ್ಪ್ಯಾನಿಷ್ ಪದದಿಂದ ಬಂದಿದೆ. ಈ ಸ್ಪ್ಯಾನಿಷ್ ಪದವು ಅಜ್ಟೆಕ್ ಭಾಷೆಯ ಮೂಲ. ಅಂದಹಾಗೆ ಟೊಮ್ಯಾಟೋ ನಿರ್ಧಿಷ್ಟವಾಗಿ ಇಲ್ಲಿಯೇ ಹುಟ್ಟಿತು ಎಂದು ಹೇಳಲು ಯಾವ ಪುರಾವೆಯೂ ಸಿಕ್ಕಿಲ್ಲ. ಸೋಲನೇಸಿಯ ಸಸ್ಯಗಳ ವಿಕಾಸದಲ್ಲಿ ಈ ಗಿಡ ಬಂದಿರಬಹುದೆಂದೇ ಸಂಶೋಧಕರು ಹೇಳುತ್ತಾರೆ.

ಈ ಟೊಮ್ಯಾಟೋವನ್ನು ಮೊದಲು ಬೆಳೆಸಿದ್ದು ಯಾರು..?
ಈಗಿನ ಪೆರು, ಬೊಲಿವಿಯಾ, ಚಿಲಿ ಮತ್ತು ಈಕ್ವೆಡಾರ್‌ಗಳಲ್ಲಿ, ಉತ್ತರ ಅಮೆರಿಕಾದ ಆಂಡಿಸ್ ಪರ್ವತ ಶ್ರೇಣಿಗಳಲ್ಲಿ ಟೊಮ್ಯಾಟೋಗಳನ್ನು ಮೊದಲು ಬೆಳೆಸಲಾಯಿತು. ಅಜ್ಟೆಕ್ ಮತ್ತು ಇಂಕಾಗಳಂತಹ ಸಂಸ್ಕೃತಿಗಳಲ್ಲಿ, ಕ್ರಿ.ಶ 700ರ ದಶಕದಲ್ಲಿ ಇವುಗಳನ್ನು ಬೆಳೆಸಲಾಗಿತ್ತು ಎಂಬುದಕ್ಕೆ ಪುರಾವೆಗಳಿವೆ ಎಂದು ಹೇಳಲಾಗುತ್ತದೆ.

ಮೊದಲು ಇದನ್ನು ವಿಷಕಾರಿ ಎಂದು ಭಾವಿಸಲಾಗುತ್ತಿತ್ತು..!

ಬ್ರಿಟನ್‌ನಲ್ಲಿ ಟೊಮ್ಯಾಟೋಗಳನ್ನು ಮೊದಲಿಗೆ ವಿಷಕಾರಿ ಹಣ್ಣುಗಳೆಂದು ಜನರು ತಿಳಿದಿದ್ದರು. ಏಕೆಂದರೆ ಟೊಮೆಟೊ ಸಸ್ಯಗಳ ಎಲೆಗಳು ಸೊಲನೇಸಿಯ ಕುಲದ “ಮಾರಣಾಂತಿಕ ನೈಟ್‌ಶೇಡ್” ಸಸ್ಯಗಳನ್ನು ಹೋಲುತ್ತವೆ. ಹೀಗಾಗಿ ಮೊದಲಿಗೆ ಅಲ್ಲಿನ ಜನ ಮನೆಯ ಸೆಂಟರ್‌ ಟೇಬಲ್‌ ಅನ್ನು ಸುಂದರವಾಗಿ ಅಲಂಕರಿಸಲು  ಈ ಟೊಮ್ಯಾಟೋಗಳನ್ನು ಬಳಸುತ್ತಿದ್ದರಂತೆ. 1800 ರ ದಶಕದಲ್ಲಿಯೂ ಸಹ ಅಮೆರಿಕಾದಲ್ಲಿ ಕೂಡಾ ಟೊಮ್ಯಾಟೋಗಳ ಬಗ್ಗೆ ಜನರಿಗೆ ಸಾಕಷ್ಟು ಅನುಮಾನಗಳಿದ್ದರು. ಇದನ್ನು “ವಿಷ ಸೇಬು” ಎಂದೂ ಕರೆಯುತ್ತಿದ್ದರು. ಇವುಗಳನ್ನು ತಿನ್ನುವ ಶ್ರೀಮಂತರು ಸತ್ತರು ಎಂದು ಕೆಲವು ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅವು ಸುಳ್ಳು ಸುದ್ದಿ. ಆ ಸಾವುಗಳಿಗೆ ಅವರು ಬಳಸಿದ ‘ಪ್ಯೂಟರ್’ ಪಾತ್ರೆಗಳೇ ಕಾರಣ ಎಂದು ನಂತರ ಬಯಲಾಗಿತ್ತು. ಆ ಪಾತ್ರೆಗಳಲ್ಲಿ ಸೀಸದ ಪ್ರಮಾಣ ತುಂಬಾ ಹೆಚ್ಚಿತ್ತು. ಈ ಕಾರಣದಿಂದ ಸಾವಾಗಿದೆ ಎಂದು ಸಂಶೋಧನೆಯಿಂದ ಗೊತ್ತಾಗಿತ್ತು.

ಟೊಮ್ಯಾಟೋಗಳಲ್ಲಿ ಆಮ್ಲ ಅಧಿಕವಾಗಿರುತ್ತದೆ. ಈ ಆಮ್ಲವು ಸೀಸದೊಂದಿಗೆ ಪ್ರತಿಕ್ರಿಯಿಸಿ ಆಹಾರ ವಿಷವಾಗಿ ಮಾರ್ಪಡುತ್ತದೆ ಎಂದು ಸಂಶೋಧನೆಯಿಂದ ಬಯಲಾಗಿದೆ.

ಅಷ್ಟಕ್ಕೂ ಟೊಮ್ಯಾಟೋ ಭಾರತಕ್ಕೆ ಬಂದಿದ್ದು ಹೇಗೆ..?

ಭಾರತಕ್ಕೆ ಟೊಮ್ಯಾಟೋವನ್ನು ಪರಿಚಯಿಸಿದವರು ಪೋರ್ಚುಗೀಸರು ಎಂದು ಆಹಾರ ಇತಿಹಾಸಕಾರರು ಹೇಳುತ್ತಾರೆ.  ಕೇಟಿ ಅಚ್ಚಯ್ಯ ಅವರು ತಮ್ಮ ‘ಇಂಡಿಯನ್ ಫುಡ್: ಎ ಹಿಸ್ಟಾರಿಕಲ್ ಕಂಪ್ಯಾನಿಯನ್’ ಪುಸ್ತಕದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. “ಟೊಮ್ಯಾಟೊ, ಮೆಕ್ಕೆಜೋಳ, ಆವಕಾಡೊ, ಗೋಡಂಬಿ ಮತ್ತು ಕ್ಯಾಪ್ಸಿಕಂನಂತಹ ಅನೇಕ ಬೆಳೆಗಳನ್ನು ಪೋರ್ಚುಗೀಸರು ಭಾರತಕ್ಕೆ ಪರಿಚಯಿಸಿದರು” ಎಂದು ಕೇಟಿ ಅಚ್ಚಯ್ಯ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

“ಭಾರತದ ತಾಪಮಾನವು ಟೊಮೆಟೊ ಬೆಳೆಗೆ ಸೂಕ್ತವಾಗಿದೆ. ಇದಕ್ಕೆ ಭಾರತದ ಮಣ್ಣು ಕೂಡ ಸೂಕ್ತವಾಗಿದೆ’’ ಎಂದು  ಸಂಶೋಧಕರು ಹೇಳುತ್ತಾರೆ. ಆದಾಗ್ಯೂ, ಈ ಬೆಳೆ ಭಾರತದಲ್ಲಿ ಮೊದಲು ಎಲ್ಲಿ ಪ್ರಾರಂಭವಾಯಿತು ಎಂದು ಹೇಳುವುದು ಕಷ್ಟ. ಬ್ರಿಟಿಷರ ಆಳ್ವಿಕೆಯಲ್ಲಿ, ಈ ಬೆಳೆಯ ಪ್ರದೇಶವು ಮತ್ತಷ್ಟು ಹೆಚ್ಚಾಯಿತು. ಇದರಲ್ಲಿ ಹೆಚ್ಚಿನ ಬೆಳೆ ಬ್ರಿಟಿಷರ ಪಾಲಾಗಿದೆ.

ವಿಶ್ವದಲ್ಲಿ ಅತಿಹೆಚ್ಚು ಟೊಮ್ಯಾಟೋ ಬೆಳೆಯುವ ಎರಡನೇ ದೇಶ ಭಾರತ

ಇಂದು, ಭಾರತವು ವಿಶ್ವದ ಎರಡನೇ ಅತಿದೊಡ್ಡ ಟೊಮ್ಯಾಟೋ ಬೆಳೆಯುವ ದೇಶವಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಂಡಳಿಯು 2022 ರಲ್ಲಿ ಟೊಮೆಟೊಗಳ ಇಳುವರಿ 20 ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಎಂದು ಅಂದಾಜಿಸಿದೆ. ರಾಜ್ಯಗಳ ವಿಷಯಕ್ಕೆ ಬಂದರೆ ಮಧ್ಯಪ್ರದೇಶದಲ್ಲಿ ಶೇ.14.63, ಆಂಧ್ರಪ್ರದೇಶದಲ್ಲಿ ಶೇ.10.92 ಮತ್ತು ಕರ್ನಾಟಕದಲ್ಲಿ ಶೇ.10.23ರಷ್ಟು ಟೊಮೆಟೊ ಬೆಳೆಯಲಾಗುತ್ತಿದೆ.

 

Share Post