3 ಡಿಸಿಎಂ ಹುದ್ದೆ ಸೃಷ್ಟಿ ವಿಚಾರ; ಸರ್ಕಾರದಿಂದಲೇ ದೂರವಾಗ್ತೀನಿ ಅಂದ್ರಾ ಡಿಕೆಶಿ..?
ಬೆಂಗಳೂರು; ರಾಜ್ಯ ಸರ್ಕಾರದಲ್ಲಿ ಹೆಚ್ಚುವರಿ ಮೂರು ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಇದಕ್ಕಾಗಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಹಿರಿಯ ದಲಿತ ಸಚಿವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಿರುವಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೈಕಮಾಂಡ್ ನಾಯಕರ ಮುಂದೆ ಶಾಕಿಂಗ್ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಇದೇ ವಿಚಾರ ಮಾತನಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು ಡಿ.ಕೆ.ಶಿವಕುಮಾರ್ ಅವರನ್ನು ಕರೆದಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್, ಒಂದು ವೇಳೆ ಹೆಚ್ಚುವರಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡಿದರೆ, ನಾನು ಸರ್ಕಾರದಿಂದಲೇ ಹೊರಬರುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಹೆಚ್ಚುವರಿ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿ.ಕೆ.ಶಿವಕುಮಾರ್, ಸುರ್ಜೇವಾಲಾ ಬಳಿ ಈ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಮೂವರು ಡಿಸಿಎಂಗಳ ನೇಮಕವಾದರೆ ನಾನು ಸರ್ಕಾರದ ಭಾಗವಾಗಿರುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ಬಯಸಿದರೆ ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ. ಆದ್ರೆ ಡಿಸಿಎಂ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರಿಂದಾಗಿ ಸುರ್ಜೇವಾಲಾ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆಗಳನ್ನು ಕೇಳುವುದು ಸರಿಯಾಗುವುದಿಲ್ಲ. ಚುನಾವಣೆ ಸಮಯದಲ್ಲಿ ಹೈಕಮಾಂಡ್ ಕೂಡಾ ಆತುರದ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಚಿವರು ತಮ್ಮ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಆದ್ರೆ ದೆಹಲಿಯಲ್ಲಿ ನಾವು ಎಲ್ಲರ ಅಭಿಪ್ರಾಯಗಳನ್ನೂ ಚರ್ಚೆ ಮಾಡುತ್ತೇವೆ. ಅನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಇನ್ನು ಮಂಗಳವಾರ ಕಲಬುರಗಿಯಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡಾ ಇದೇ ರೀತಿಯ ಹೇಳಿಕೆ ನೀಡಿದ್ದರು. ಚುನಾವಣೆ ಸಮಯದಲ್ಲಿ ಇಂತಹ ಬೇಡಿಕೆಗಳನ್ನು ಇಡಬಾರದು. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಚಿವರು ಕೆಲಸ ಮಾಡಬೇಕು ಎಂದಿದ್ದರು. ಹೆಚ್ಚುವರಿ ಡಿಸಿಎಂಗಳ ಸೃಷ್ಟಿ ವಿಚಾರ ಹೈಕಮಾಂಡ್ ಮುಂದಿಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಹೀಗಾಗಿ ಸತೀಶ್ ಜಾರಕಿಹೊಳಿ ಟೀಂ ಎಷ್ಟೇ ಪ್ರಯತ್ನ ಪಟ್ಟರೂ ಮೂರು ಡಿಸಿಎಂ ಹುದ್ದೆಗಳ ಸೃಷ್ಟಿ ಅಸಾಧ್ಯ ಎಂದೇ ಹೇಳಲಾಗುತ್ತಿದೆ.