ಐಎಂಎ ನಡೆಸುತ್ತಿದ್ದ ಸ್ಕೂಲ್ ಬಂದ್; ಮಕ್ಕಳು, ಪೋಷಕರು ಕಂಗಾಲು
ಬೆಂಗಳೂರು; ಐಎಂಎ ನಡೆಸುತ್ತಿದ್ದ ಬೆಂಗಳೂರಿನ ಶಿವಾಜಿನಗರದ ನೆಹರೂ ಶಾಲೆಯನ್ನು ಲಾಕ್ ಮಾಡಲಾಗಿದೆ. ಇದರಿಂದಾಗಿ ಮಕ್ಕಳ ಭವಿಷ್ಯದ ಬಗ್ಗೆ ಆತಂಕಗೊಂಡ ಪೋಷಕರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಈಗಾಗಲೇ ಆಸ್ತಿ ಮುಟ್ಟುಗೋಲು ಹಾಕಿ ಹೂಡಿಕೆದಾರರ ಹಣವನ್ನು ವಾಪಸ್ಸು ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಹೈಕೋರ್ಟ್ ಆದೇಶದಂತೆ ನಿನ್ನೆ ರಾತ್ರಿ ಐಎಂಐ ನಡೆಸುತ್ತಿದ್ದ ಶಿವಾಜಿನಗರ ಭಾರತಿನಗರದ ನೆಹರೂ ಸ್ಕೂಲ್ ಆಸ್ತಿಯೂ ಕೂಡ ಸೀಜ್ ಆಗಿದ್ದು ನೋಟಿಸ್ ಅಂಟಿಸಲಾಗಿದೆ. ಇದರ ಅರಿವೇ ಇಲ್ಲದೇ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಲೆ ಸೀಜ್ ಆಗಿದ್ದು ನೋಡಿ ಫುಲ್ ಶಾಕ್ ಆಗಿದ್ದಾರೆ. ಶಾಲಾ ಆವರಣದಲ್ಲಿ ಧರಣಿ ಕೂತರು. ಸ್ಥಳಕ್ಕೆ ಬಂದ ಪೊಲೀಸರು ಪೋಷಕರನ್ನು ನಿಯಂತ್ರಣ ಕ್ಕೆ ತರಲು ಹರಸಾಹಸ ಪಟ್ಟರು. ಪೋಷಕರ ಪ್ರತಿಭಟನೆಗೆ ಎಎಪಿ ಕೂಡ ಸಾಥ್ ಕೊಟ್ಟಿತ್ತು.
ಗಲಾಟೆ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಶಾಸಕ ರಿಜ್ವಾನ್ ಅರ್ಷದ್, ಕ್ಷೇತ್ರ ಶಿಕ್ಷಣಾಧಿಕಾರಿ ಜಯಪ್ರಕಾಶ್ ಸೋಮವಾರ ಶಿಕ್ಷಣ ಇಲಾಖೆಯ ಜೊತೆ ಪೋಷಕರ ಜೊತೆ ಸಭೆ ನಡೆಸುವುದಾಗಿ ಹೇಳಿದರು. ಆದರೆ ಪೋಷಕರು, ಅನುದಾನಿತ ಅಥವಾ ಸರ್ಕಾರಿ ಶಾಲೆಗೆ ದಾಖಲಾತಿ ಮಾಡಿ ಪರ್ಯಾಯ ವ್ಯವಸ್ಥೆ ಬೇಕಾಗಿಲ್ಲ. ಇದೇ ಶಾಲೆಯಲ್ಲಿ ಮುಂದುವರೆಸಿ ಅಂತಾ ಪಟ್ಟು ಹಿಡಿದರು. ಆದರೆ ಇಲ್ಲಿ ಮುಂದುವರಿಸಲು ಅಸಾಧ್ಯ, ಸೋಮವಾರ ಸಭೆಯಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಅಂತಾ ಸಮಾಧಾನ ಪಡಿಸಿದರು.