ಚುನಾವಣೆ ನಡೆಸಲು ವಿಳಂಬ ಧೋರಣೆ; ಸರ್ಕಾರಕ್ಕೆ 5 ಲಕ್ಷ ರೂ. ದಂಡ
ಬೆಂಗಳೂರು; ಜಿಲ್ಲಾ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆ ನಡೆಸದೇ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಗರಂ ಆಗಿದೆ. ಅಷ್ಟೇ ಅಲ್ಲದೇ, ಚುನಾವಣೆ ವಿಳಂಬ ಮಾಡಿದ್ದಕ್ಕೆ ಸರ್ಕಾರಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ಅಧಿನಿಯಮ ರದ್ದುಪಡಿಸಬೇಕು ಹಾಗೂ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿ ನೀಡಲು ನಿರ್ದೇಶಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಆಶೋಕ್ ಎಸ್.ಕಿಣಗಿ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ವಿಚಾರಣೆ ವೇಳೆ ಹಾಜರಿದ್ದ ಸರ್ಕಾರಿ ಪರ ವಕೀಲರು, ಕ್ಷೇತ್ರ ಪುನರ್ ವಿಂಗಡಣೆಗೆ ಇನ್ನೂ 90 ದಿನ ಕಾಲಾವಾಕಾಶ ಬೇಕು ಅಂತ ಮನವಿ ಮಾಡಿದ್ರು. ಇದನ್ನು ಒಪ್ಪದ ಕೋರ್ಟ್, ಪದೇ ಪದೇ ಕಾಲಾವಕಾಶ ಕೇಳುತ್ತಿರುವುದು ತಪ್ಪು ಎಂದು ಹೇಳಿತು. ಅಷ್ಟೇ ಅಲ್ಲದೆ, 2023ರ ಫೆಬ್ರುವರಿ 1ರೊಳಗೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರ ಪುನರ್ವಿಂಡಣೆ ಹಾಗೂ ಮೀಸಲಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೋರ್ಟ್ ತಾಕೀತು ಮಾಡಿತು.