Bengaluru

ಬೆಂಗಳೂರಿನಲ್ಲಿ ದಾಖಲೆಯ ಮಳೆ; ಮುಳುಗಿತು ಸಿಲಿಕಾನ್‌ ಸಿಟಿ ಇಳೆ..!

ಬೆಂಗಳೂರು; ಬೆಂಗಳೂರಿನಲ್ಲಿ ರಾತ್ರಿಯಿಡೀ ಮಳೆ ಸುರಿದಿದ್ದು, ದಾಖಲೆಯ ಮಳೆಯಾಗಿದೆ. ಇದರಿಂದಾಗಿ ಇಡೀ ಬೆಂಗಳೂರು ತತ್ತರಿಸಿದೆ. ರಸ್ತೆಗಳೇ ನದಿಗಳಂತೆ ಹರಿಯುತ್ತಿವೆ. ವಾಹನ ಸವಾರರು ಕಚೇರಿಗಳಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ.
   ಮಾರತ್ತಹಳ್ಳಿ, ವರ್ತೂರು, ಬೆಳ್ಳಂದೂರು, ಹೆಚ್​ಎಎಲ್​ ಏರ್​ಪೋರ್ಟ್​, ತಾವರಕೆರೆ, ಸಾತನೂರು ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಯಲ್ಲಿ ಮಳೆನೀರು ತುಂಬಿಕೊಂಡಿದೆ. ಮಾರತ್ತಹಳ್ಳಿ-ಸಿಲ್ಕ್​ ಬೋರ್ಡ್​ ಜಂಕ್ಷನ್​​ನಲ್ಲಿ ಬೆಳಗ್ಗೆಯಿಂದಲೇ ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ರಸ್ತೆಗಳಲ್ಲೇ ನೀರು ಹರಿಯುತ್ತಿದ್ದರಿಂದ ವಾಹನಗಳ ಓಡಾಟಕ್ಕೆ ಕಷ್ಟವಾಗಿತ್ತು. ಬಹುತೇಕ ರಸ್ತೆಗಳು ತುಂಬಿ ಹರಿಯುವ ನದಿಗಳಂತಾಗಿವೆ. ಕೇವಲ 24 ಗಂಟೆಗಳಲ್ಲಿ 88 ಮಿಮೀ ಮಳೆಯಾಗಿದೆ. 2014ರ ಬಳಿಕ ಸುರಿದ ಅತಿಹೆಚ್ಚಿನ ಮಳೆ ಇದೆಂದು ಹೇಳಲಾಗುತ್ತಿದೆ. ಹೀಗಾಗಿ, ಅನೇಕ ಸ್ಥಳಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

    ಬಾಣಸವಾಡಿ, ಜಯನಗರ, ಜೆ.ಪಿ.ನಗರ, ವಿಜಯ ನಗರ, ಮಲ್ಲೇಶ್ವರ, ರಾಜಾಜಿನಗರ, ಮೈಸೂರು ರಸ್ತೆ, ಕೆಂಗೇರಿ ಮುಂತಾದ ಕಡೆ ಭಾರಿ ಮಳೆಯಾಗಿದೆ. ತಗ್ಗು ಪ್ರದೇಶಗಳು ಹಾಗು ಅಂಡರ್ ಪಾಸ್​ಗಳಲ್ಲಿ ನೀರು ತುಂಬಿದೆ. ಶಿವಾನಂದ ಸರ್ಕಲ್​ನಲ್ಲಿ ಮ್ಯಾನ್‌ ಹೋಲ್ ತೆರೆದುಕೊಂಡು ನೀರು ರಸ್ತೆಯ ಮೇಲೆಲ್ಲಾ ಹರಿದಿದೆ. ಇದ್ರಿಂದಾಗಿ ಶಿವಾನಂದ ಸರ್ಕಲ್‌ ಕೆರೆಯಂತೆ ಭಾಸವಾಗುತ್ತಿತ್ತು. ಶಾಂತಿನಗರದ ಮುಖ್ಯರಸ್ತೆಯಲ್ಲಿ ನಿಂತ ಮಳೆ ನೀರು ವಾಹನ ಸವಾರರನ್ನು ಪೇಚಿಗೆ ಸಿಲುಕಿಸಿತ್ತು. ಅಂದಾಜು ಮೂರು ಅಡಿ ನಿಂತ‌ ಮಳೆ ನೀರಿನಲ್ಲಿ ವಾಹನಗಳ ಓಡಾಟ ದುಸ್ತರವಾಗಿತ್ತು. ನೀರಿನಲ್ಲಿಯೇ ಆಟೋ, ಕಾರು, ಬೈಕ್ ಸವಾರರು ಸಾಗಿದರು.

Share Post