ಆಯನೂರು ಆರೋಪ ನಿರಾಧಾರ; ಸಿಬ್ಬಂದಿಗಳನ್ನು ನಿರ್ಲಕ್ಷಿಸಿಲ್ಲ- ಸುಧಾಕರ್
ಬೆಂಗಳೂರು; ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ಹೊರ ಗುತ್ತಿಗೆ ಸಿಬ್ಬಂದಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಲು ಸಾಧ್ಯವೊ ಅವೆಲ್ಲವನ್ನೂ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಶ್ರೀನಿವಾಸಚಾರಿ ಸಮಿತಿ ಶಿಫಾರಸ್ಸುಗಳ ಅನುಷ್ಠಾನ ಸಂಬಂಧ ಸಿಬ್ಬಂದಿ ಸಂಘಟನೆ ಪದಾಧಿಕಾರಿಗಳ(ಕೆಎಸ್‌ಎಚ್‌ಒಸಿಇಎ) ಜತೆ ಅನೇಕ ಸಭೆ ನಡೆಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಸಂಘಟನೆ ಗೌರವಾಧ್ಯಕ್ಷರಾಗಿರುವ ವಿಧಾನಪರಿಷತ್ ಸದಸ್ಯ ಆಯೂನೂರು ಮಂಜುನಾಥ್ ಮತ್ತು ಹಿರಿಯ ಅಧಿಕಾರಿಗಳು ಕೂಡ ಆ ಸಭೆಗಳಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಸ್ತುಸ್ಥಿತಿ ಹೀಗಿರುವಾಗ ಶ್ರೀನಿವಾಸಚಾರಿ ಸಮಿತಿ ವರದಿಯನ್ನು ನಿರ್ಲಕ್ಷಿಸಲಾಗಿದೆ. ಒಂದು ವರ್ಷವಾದರೂ ಯಾವ ಕ್ರಮ ಕೈಗೊಂಡಿಲ್ಲ ಎಂದು ಆಯನೂರು ಮಂಜುನಾಥ್ ಏಕೆ ಹೇಳಿಕೆ ನೀಡಿದರೊ ಗೊತ್ತಿಲ್ಲ. ಸಭೆಗಳಲ್ಲಿ ಕೈಗೊಂಡ ನಿರ್ಧಾರ ಮತ್ತು ಅಧಿಕಾರಿಗಳಿಗೆ ನೀಡಲಾದ ಸೂಚನೆಗಳ ಬಗ್ಗೆ ಅವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಇದ್ದಕ್ಕಿದ್ದಂತೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಆಶ್ಚರ್ಯ ಉಂಟು ಮಾಡಿದೆ ಎಂದಿದ್ದಾರೆ.
ಸಂಘಟನೆ, ಹೋರಾಟಗಳ ಮೂಲಕ ಸಾರ್ವಜನಿಕ ಬದುಕಿನಲ್ಲಿರುವ ಆಯನೂರು ಮಂಜುನಾಥ್ ಅವರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಆದರೆ ವಾಸ್ತವಕ್ಕೆ ವಿರುದ್ಧವಾಗಿ ಅವರು ಹೇಳಿಕೆ ನೀಡಿರುವುದು ಸರಿಯಲ್ಲ. ವರದಿಯ ಬಹುತೇಕ ಶಿಫಾರಸ್ಸುಗಳ ಈಡೇರಿಕೆಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ಪಡೆದುಕೊಳ್ಳಬಹುದು.
ಗುತ್ತಿಗೆ ನೌಕರರ ಸೇವೆ ಕಾಯಂಗೊಳಿಸುವ ಬೇಡಿಕೆ ಆರೋಗ್ಯ ಇಲಾಖೆಗೆ ಸೀಮಿತವಾದ ವಿಷಯವಲ್ಲ. ಎನ್‌ಎಚ್‌ಎಂ ಅಡಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇಕಡಾ 60: 40 ಅನುಪಾತದಲ್ಲಿ ವೆಚ್ಚ ಭರಿಸುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಆ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಬಹುತೇಕ ಎಲ್ಲ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ, ಒಟ್ಟಾರೆ ಅವರೆಲ್ಲರಿಗೂ ಅನ್ವಯ ಆಗುವಂತೆ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಸಂಪನ್ಮೂಲ ಬೇಕಾಗುತ್ತದೆ. ಇಷ್ಟಾದರೂ ಸಿಬ್ಬಂದಿಗಳ ಸೇವೆ ಕಾಯಂಗೊಳಿಸಬೇಕು ಎಂಬ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಗಣಿಸವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಮನವಿ ಮಾಡಲಾಗಿದೆ. ಆಯನೂರು ಅವರು ಸಚಿವರಾಗಿದ್ದರೂ ಈ ವಿಷಯದಲ್ಲಿ ಇದಕ್ಕಿಂತ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದೂ ಸಚಿವ ಸುಧಾಕರ್ ವಿವರಿಸಿದ್ದಾರೆ.