ಹೆಚ್ಡಿಕೆ ಆರೋಗ್ಯದಲ್ಲಿ ಚೇತರಿಕೆ; ವೈದ್ಯರು ಹಾಕಿದ ಕಂಡೀಷನ್ ಏನು..?
ಬೆಂಗಳೂರು; ತೀವ್ರ ಅನಾರೋಗ್ಯದಿಂದ ನಿನ್ನೆ ಬೆಳಗಿನಜಾವ ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಹೀಗಾಗಿ ಅವರನ್ನು ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ಮೂರು ದಿನಗಳ ಕಾಲ ವಾರ್ಡ್‌ನಲ್ಲೇ ಕುಮಾರಸ್ವಾಮಿಯವರಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ, ಕುಮಾರಸ್ವಾಮಿಗೆ ವೈದ್ಯರು ಒಂದು ಕಂಡೀಷನ್ ಹಾಕಿದ್ದಾರೆ. ಈ ಮೂರು ದಿನಗಳಲ್ಲಿ ಯಾರನ್ನೂ ಭೇಟಿಯಾಗದಂತೆ ಸೂಚನೆ ಕೊಟ್ಟಿದ್ದಾರೆ.
ಇನ್ನೊಂದೆಡೆ ಕುಮಾರಸ್ವಾಮಿಯವರ ಮಗ ನಿಖಿಲ್ ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿದ್ದರು. ತಂದೆಯ ಅನಾರೋಗ್ಯದ ವಿಚಾರ ತಿಳಿಯುತ್ತಿದ್ದಂತೆ ಅವರು ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ಬೆಳಗ್ಗೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ನಿಖಿಲ್ ಅವರು ತಂದೆಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನಿನ್ನೆ ಬೆಳಗಿನ ಜಾವ 3.40ರ ಸುಮಾರಿಗೆ ಜಯನಗರದ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಜ್ವರವಿದ್ದು, ಕುಮಾರಸ್ವಾಮಿ ಅವರಿಗೆ ಲಘುವಾದ ಸ್ಟ್ರೋಕ್ ಆಗಿತ್ತು. ಅವರ ಮಿದುಳಿನ ಎಡಭಾಗದಲ್ಲಿ ತೊಂದರೆ ಉಂಟಾಗಿ ಶರೀರದ ಬಲಭಾಗಕ್ಕೆ ಸಮಸ್ಯೆ ಆಗಿತ್ತು. ಈಗ ಎಲ್ಲವೂ ಸರಿಹೋಗಿದ್ದು, ಕುಮಾರಸ್ವಾಮಿಯವರು ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.