BengaluruPolitics

ಕುಮಾರಸ್ವಾಮಿ ಗಾಳಕ್ಕೆ ಬಿದ್ದರಾ ಜಗದೀಶ್‌ ಶೆಟ್ಟರ್‌..?; ಹೇಗೆ ನಡೀತು ಗೊತ್ತಾ ಆಪರೇಷನ್‌..?

ಬೆಂಗಳೂರು; ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಮರಳಿ ಬಿಜೆಪಿಗೆ ವಾಪಸ್ಸಾಗೋದಕ್ಕೆ ಕಾರಣವಾದವರು ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಮಾಜಿ ಸಿಎಂ ಕುಮಾರಸ್ವಾಮಿ ಅನ್ನೋದು ಈ ಬಯಲಾಗಿದೆ. ಕುಮಾರಸ್ವಾಮಿಯವರು ಮನವೊಲಿಸಿದ ಕಾರಣಕ್ಕಾಗಿಯೇ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಾಲ್ಕು ದಿನಗಳ ಹಿಂದೆ ಜಗದೀಶ್‌ ಶೆಟ್ಟರ್‌ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿಯವರು ರಹಸ್ಯ ಸ್ಥಳವೊಂದಕ್ಕೆ ಕರೆಸಿಕೊಂಡಿದ್ದರು. ಅಲ್ಲಿ ಹಲವು ಗಂಟೆಗಳ ಕಾಲ ಇಬ್ಬರೂ ಗುಪ್ತವಾಗಿ ಮಾತನಾಡಿದ್ದಾರೆ. ಹೈಕಮಾಂಡ್‌ ಜೊತೆ ಮಾತನಾಡಿ ಸೂಕ್ತಸ್ಥಾನಮಾನ ಕೊಡಿಸುವ ಸಂಬಂಧವೂ ಮಾತುಕತೆಯಾಗಿದೆ. ಕುಮಾರಸ್ವಾಮಿಯವರ ಮಾತಿಗೆ ಒಪ್ಪಿ ಶೆಟ್ಟರ್‌ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಶೆಟ್ಟರ್‌ ಜೊತೆ ರಹಸ್ಯ ಮಾತುಕತೆ ನಡೆಸಿದ ನಂತರ ಕುಮಾರಸ್ವಾಮಿಯವರು ಯಾರಿಗೂ ತಿಳಿಸದೇ ದೆಹಲಿಗೆ ತೆರಳಿದ್ದರು. ಇತ್ತ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಕೂಡಾ ಶೆಟ್ಟರ್‌ ಬರುವಿಕೆಗಾಗಿ ದೆಹಲಿಯಲ್ಲಿ ಕಾಯುತ್ತಿದ್ದರು. ಇತ್ತ ಶೆಟ್ಟರ್‌ ದೆಹಲಿಗೆ ಬರುತ್ತಿದ್ದಂತೆ ಅಲ್ಲಿದ್ದರೆ ಚೆನ್ನಾಗಿರೋದಿಲ್ಲ ಎಂದು ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಅನಂತರ ಶೆಟ್ಟರ್‌ ಅವರು ಅಮಿತ್‌ ಶಾ ಅವರನ್ನು ಭೇಟಿಯಾಗಿ ಮಾತುಕತೆಯಾಡಿದ್ದಾರೆ. ಅನಂತರ ಪಕ್ಷಕ್ಕೆ ಸೇರಿದ್ದಾರೆ. ಅಂದಹಾಗೆ ಜೆಡಿಎಸ್‌ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಇನ್ನೊಂದೆಡೆ ವಿಧಾನಸಭಾ ಚುನಾವಣೆ ಸೋಲಿನ ನಂತರ ಕುಮಾರಸ್ವಾಮಿಯವರು ಕಾಂಗ್ರೆಸ್‌ ಪಕ್ಷದ ವಿರುದ್ಧ ಸಿಡಿದು ನಿಂತಿದ್ದಾರೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ರಾಮನಗರದಲ್ಲಿ ನಿಖಿಲ್‌ ಸೋಲಿನಿಂದ ಕಂಗೆಟ್ಟಿರುವ ಕುಮಾರಸ್ವಾಮಿ ಹೇಗಾದರೂ ಮಾಡಿ ಕಾಂಗ್ರೆಸ್‌ಗೆ ಸೋಲುಣಿಸಲು ಪಣತೊಟ್ಟಿದ್ದಾರೆ.

ಸದ್ಯ ಕುಮಾರಸ್ವಾಮಿಯವರಿಗೆ ತಮ್ಮ ಪಕ್ಷ ಗೆಲ್ಲುವುದಕ್ಕಿಂತ ಕಾಂಗ್ರೆಸ್‌ ಸೋಲುವುದು ಬೇಕಾಗಿದೆ. ಈ ಕಾರಣಕ್ಕಾಗಿ ಅವರು ಬಿಜೆಪಿ ಜೊತೆ ಸೇರಿ ಕಾಂಗ್ರೆಸ್‌ ವಿರುದ್ಧ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

Share Post