Bengaluru

ಇಂದಿನಿಂದ ಹರ್‌ ಘರ್‌ ತಿರಂಗ ಅಭಿಯಾನ; ಎಲ್ಲೆಡೆ ಹಾರಿದ ತ್ರಿವರ್ಣ ಧ್ವಜ

ಬೆಂಗಳೂರು; ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ದೇಶದೆಲ್ಲೆಡೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸಲು ರಾಜ್ಯದಲ್ಲೂ ಸಕಲ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 1 ಕೋಟಿ ಮನೆಗಳಲ್ಲಿ, ಸರ್ಕಾರಿ, ಖಾಸಗಿ ಕಟ್ಟಡಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಇಂದು ಬೆಳಗ್ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಗಳು ರಾಜ್ಯದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.

ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆ ಮನೆಗಳಲ್ಲಿ ರಾಷ್ಟ್ರಧ್ವಜ’ ಅಭಿಯಾನಕ್ಕೆ ತ್ರಿವರ್ಣ ಬಣ್ಣದ ಬಲೂನ್‌ ಆಕಾಶಕ್ಕೆ ಹಾರಿಸಿ ಬಿಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಚಾಲನೆ ನೀಡಿದರು.
ವಿಧಾನಸೌಧದ ವಿಶಾಲವಾದ ಮೆಟ್ಟಿಲುಗಳ ಮೇಲೆ ತ್ರಿವರ್ಣ ಧ್ವಜ ಹಿಡಿದು ಸಾವಿರಾರು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ‘ಮನೆ ಮನೆಯ ಮೇಲೆ ರಾಷ್ಟ್ರಧ್ವಜ ಎನ್ನುವುದು ಪ್ರಧಾನಿ ನರೇಂದ್ರ ಮೋದಿಯವರ ಸಂದೇಶ. ಆ. 13ರಿಂದ 15ರವರೆಗೆ ಮೂರು ದಿನ ದೇಶದ 40 ಕೋಟಿ ಮನೆಗಳ ಮೇಲೆ ಇವತ್ತು ರಾಷ್ಟ್ರಧ್ವಜ ರಾರಾಜಿಸಲಿದೆ. ಈ ಕಾರ್ಯಕ್ರಮವನ್ನು ಐತಿಹಾಸಿಕ ಮೆಟ್ಟಿಲುಗಳ ಮೇಲೆ ಎಲ್ಲರೂ ಸೇರಿ ಮಾಡುತ್ತಿದ್ದೇವೆ’ ಎಂದರು.

ಸಿಎಂ  ಅವರ ನಿವಾಸದಲ್ಲೂ ತಿರಂಗ ಹಾರಿಸಲಾಯಿತು. ಇನ್ನು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಕೂಡಾ ತಮ್ಮ ಮನೆ ಮೇಲೆ ರಾಷ್ಟ್ರ ಧ್ವ ಹಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಮಕ್ಕಳೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸಿ  ಸಂಭ್ರಮಿಸಿದ್ದಾರೆ.

ಈಗಾಗಲೇ ಧ್ವಜ ಮಾರಾಟ, ವಿತರಣೆ ಕಾರ್ಯ ಬಹುತೇಕ‌ ಮುಗಿದಿದೆ.‌ ಇಂದಿನಿಂದ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದ ವಾತಾವರಣ ನಿರ್ಮಾಣ ಆಗಲಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸರ್ಕಾರಿ ಕಚೇರಿಗಳಲ್ಲಿ ಈ ಮೂರು ದಿನಗಳಂದು ಪ್ರತಿ ದಿನ ಬೆಳಗ್ಗೆ ಧ್ವಜಾರೋಹಣ ಮಾಡಿ, ಸಂಜೆ ಇಳಿಸಬೇಕು. ಹಾಗೂ ಮನೆಗಳಲ್ಲಿ ಇಂದು ಬೆಳಗ್ಗೆ ಧ್ವಜಾರೋಹಣ ಮಾಡಿ 15ರವರೆಗೆ ಇರಿಸಬಹುದಾಗಿದೆ.

 

Share Post