BengaluruPolitics

ಹನುಮ ಧ್ವಜ ತೆರವು ಪ್ರಕರಣ; ಸರ್ಕಾರ ನಕಲಿ ದಾಖಲೆ ಸೃಷ್ಟಿಸಿದೆ ಎಂದ ಹೆಚ್ಡಿಕೆ

ಬೆಂಗಳೂರು; ಕೆರಗೋಡಿನಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧ ಆಡಳಿತ ಪಕ್ಷದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ. ಧ್ವಜ ಸ್ತಂಬದ ವಿಚಾರವಾಗಿ ಸರ್ಕಾರ ನಕಲಿ ದಾಖಲೆ ಸೃಷ್ಟಿ ಮಾಡಿದ್ದು, ಅದನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಸಚಿವ ಚಲುವರಾಯಸ್ವಾಮಿಯವರು ಕುಮಾರಸ್ವಾಮಿಯವರ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು,  ಗೌರಿ ಶಂಕರ್ ಸೇವಾ ಟ್ರಸ್ಟ್ ನವರು ಧ್ವಜಸ್ತಂಭಕ್ಕೆ ಅನುಮತಿ ಕೇಳಿದ್ದರು. ಈ ವೇಳೆ ಅವರು ಯಾವ ಧ್ವಜ ಅಂತ ಹೇಳಿರಲಿಲ್ಲ. ಆದರೂ ಅದಕ್ಕೆ ಗ್ರಾಮ ಪಂಚಾಯತ್‌ನಿಂದ ಅನುಮತಿ ನೀಡಲಾಗಿತ್ತು. ಆದ್ರೆ ಈಗ ಸರ್ಕಾರ ನಕಲಿ ದಾಖಲೆ ಸೃಷ್ಟಿ ಮಾಡಿ, ತಿರುಚೋ ಪ್ರಯತ್ನ ಮಾಡುತ್ತಿದೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಧ್ವಜಸ್ತಂಭ ಮಾಡೋದಕ್ಕೆ ಗೌರಿ ಶಂಕರ್ ಟ್ರಸ್ಟ್​ಗೆ ನವೆಂಬರ್ ತಿಂಗಳಲ್ಲಿ ಅನುಮತಿ ಕೊಡಲಾಗಿತ್ತು. ಈ ವೇಳೆ ಇಂತಹದ್ದೇ ಧ್ವಜ ಎಂದು ಅನುಮತಿ ಪತ್ರದಲ್ಲಿ ಉಲ್ಲೇಖ ಮಾಡಿರಲಿಲ್ಲ. ಆದ್ರೆ 2023ರ ಡಿಸೆಂಬರ್ 29ರಂದು ಹೊಸ ಅರ್ಜಿ ತೆಗೆದುಕೊಂಡಿದ್ದು, ಅದನ್ನು ತಿದ್ದಿ ತೋರಿಸುತ್ತಿದ್ದಾರೆ. ಈ ಅನುಮತಿ ಪತ್ರದಲ್ಲಿ ತ್ರಿವರ್ಣ ಧ್ವಜ, ಕನ್ನಡ ಧ್ವಜ ಹಾಕಲು ಅನುಮತಿ ನೀಡಿದ್ದೇವೆ ಎಂದಿದೆ. ಈ ಅರ್ಜಿಯನ್ನು ಜನವರಿ ತಿಂಗಳಲ್ಲಿ ಸೃಷ್ಟಿ ಮಾಡಿಕೊಳ್ಳಲಾಗಿದೆ ಎಂದೂ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

 

Share Post