ಬಹುಕೋಟಿ ವಂಚನೆ ಪ್ರಕರಣ; ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಅರೆಸ್ಟ್
ಬೆಂಗಳೂರು; ಬೆಂಗಳೂರಿನ ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ನಡೆದ ಸಾವಿರಾರು ಕೋಟಿ ಅಕ್ರಮ ಪ್ರಕರಣ ಸಂಬಂಧ, ಬ್ಯಾಂಕ್ ಅಧ್ಯಕ್ಷ ಕೆ.ರಾಮಕೃಷ್ಣ ಅವರನ್ನು ಇಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. 1554 ಕೋಟಿ ರೂಪಾಯಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬ್ಯಾಂಕ್ ಅಧ್ಯಕ್ಷರನ್ನು ಬಂಧಿಸಿದ್ದಾರೆ.
ಇಂದು ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಅದ್ಯಕ್ಷ ಕೆ. ರಾಮಕೃಷ್ಣ ಅವರನ್ನು ಬೆಂಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಇಡಿ ವಶಕ್ಕೆ ನೀಡಿದ್ದಾರೆ. ನಕಲಿ ದಾಖೆಗಳ ಮೂಲಕ ಸಾಲ ಮಂಜೂರು ಮಾಡಿ ಬ್ಯಾಂಕ್ಗೆ ನಷ್ಟ ಉಂಟು ಮಾಡಿದ ಆರೋಪ ಇದೆ. ರಾಮಕೃಷ್ಣ ಅವರು ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 2876 ಕೋಟಿ ರೂಪಾಯಿ ಸಾಲ ನೀಡಿದ್ದರು. ಇದರಲ್ಲಿ 892 ಕೋಟಿ ರೂಪಾಯಿಯನ್ನು ಅಕ್ರಮವಾಗಿ ನೀಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವುಗಳ ಹೆಸರಿನಲ್ಲಿ ಸಾಲ ನೀಡಿದ ಆರೋಪ ಎದುರಿಸುತ್ತಿದ್ದಾರೆ.