Bengaluru

ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗ ರಚನೆ : ಮುಖ್ಯಮಂತ್ರಿ ಘೋಷಣೆ

ಬೆಂಗಳೂರು; ರಾಜ್ಯ ಸರ್ಕಾರಿ ನೌಕರರಿಗೆ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸಲು ಇದೇ ಅಕ್ಟೋಬರ್ ತಿಂಗಳಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ವಿಧಾನ ಸೌಧದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ನೌಕರರು, ವಿಶೇಷವಾಗಿ ಪತ್ರಾಂಕಿತ ಎ ಮತ್ತು ಬಿ ಗುಂಪಿನ ನೌಕರರು, ಪುಣ್ಯ ಕೋಟಿ ಯೋಜನೆಯಡಿ 11,000 ರೂಪಾಯಿ ನೀಡಿ, ಗೋವುಗಳನ್ನು ದತ್ತು ಪಡೆದು, ಗೋ ಸಂರಕ್ಷಣೆ ಮಾಡುವಂತೆ ಮನವಿ ಮಾಡಿದರು.

ಸರ್ಕಾರದ ಪ್ರಮುಖವಾದ ಒಂದು ಭಾಗ ಮತ್ತು ಅಂಗ. ಬೆಳಿಗ್ಗೆ ಯಿಂದ ಸಂಜೆಯವರೆಗೆ ಮಾಡುವ ಕೆಲಸ ಕರ್ತವ್ಯ ಎನಿಸುತ್ತದೆ. ಬದುಕಿನಲ್ಲಿ ಸೇವೆ ಮಾಡಿ ಸಂತೃಪ್ತಿ ಪಡೆಯುವುದು ಕಾಯಕ. ಸರ್ಕಾರಕ್ಕೆ ತೆರಿಗೆ ಪಾವತಿಸುವ ಪ್ರಜೆಗಳೇ ನಮ್ಮ ಮಾಲೀಕರು. ಆದಕಾರಣ, ಕಾಲಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸಿ ಎಂದರು.

ರಾಜ್ಯ ಸರ್ಕಾರದ ವತಿಯಿಂದ ಪ್ರಪ್ರಥಮ ಬಾರಿಗೆ ಆಯೋಜಿಸಿದ್ದ ಸರ್ಕಾರಿ ನೌಕರರ ದಿನಾಚರಣೆಯ ಸುಸಂದರ್ಭದಲ್ಲಿ ಆರೋಗ್ಯ ಸಂಜೀವಿನಿ ನಗದು ರಹಿತ ವೈದ್ಯಕೀಯ ಸೇವಾ ಯೋಜನೆಗೆ ಚಾಲನೆ ನೀಡಿ, 30 ನೌಕರರಿಗೆ ತಲಾ ಐವತ್ತು ಸಾವಿರ ರೂಪಾಯಿ ನಗದು ಒಳಗೊಂಡ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡುತ್ತಿದ್ದರು.

ಕಂದಾಯ ಸಚಿವ ಆರ್ ಅಶೋಕ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್ ಅವರೂ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Share Post