ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುವ ಭೀತಿ; ನಿವೃತ್ತಿಗೆ ಚಿಂತಿಸುತ್ತಿದ್ದಾರಾ ಬಿಜೆಪಿ ಸಂಸದರು..?
ಬೆಂಗಳೂರು; ಮುಂದಿನ ವರ್ಷ ಲೋಕಸಭಾ ಚುನಾವಣೆ ನಡೆಯಲಿದೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಶುರುವಾಗಿದೆ. ಅದರಲ್ಲೂ ವಿಧಾನಸಭಾ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ರಾಜ್ಯದಲ್ಲಿ ಲೋಕಾಸಭಾ ಚುನಾವಣೆ ಗೆಲ್ಲಲು ಸಕಲ ತಯಾರಿ ನಡೆಸಿದೆ. ರಾಜ್ಯದಲ್ಲಿ ಹಾಲಿ ಇರುವ ಸಂಸದರಲ್ಲಿ 10-12 ಮಂದಿಗೆ ಟಿಕೆಟ್ ನೀಡೋದಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಹಲವು ಸಂಸದರು ಈ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇದೇ ಕಾರಣಕ್ಕೆ ಕೆಲವರು ಈಗಾಗಲೇ ರಾಜಕೀಯ ನಿವೃತ್ತಿಯ ಮಾತನ್ನಾಡುತ್ತಿದ್ದಾರೆ.
ಕೆಲವರಿಗೆ ವಯಸ್ಸಾಗಿದೆ. ಇನ್ನು ಕೆಲವರು ನಿಷ್ಕ್ರಿಯರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹತ್ತರಿಂದ ಹನ್ನೆರಡು ಸಂಸದರಿಗೆ ಬಿಜೆಪಿಯಿಂದ ಈ ಬಾರಿ ಟಿಕೆಟ್ ಸಿಗಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಸುದ್ದಿ ಹರಿದಾಡುತ್ತಿದ್ದಂತೆ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಸುದ್ದಿಗಳು ಹರಿದಾಡುತ್ತಿದ್ದರೂ ಹೈಕಮಾಂಡ್ ಯಾಕೆ ಮೌನ ವಹಿಸಿದೆ ಎಂದು ಪ್ರಶ್ನೆ ಮಾಡಿದ್ದರು. ಈ ಬೆನ್ನಲ್ಲೇ ಇನ್ನೂ ಒಂದಷ್ಟು ಸಂಸದರು ಅಸಮಾಧಾನಗೊಂಡಂತೆ ಕಾಣುತ್ತಿದೆ.
ಚುನಾವಣಾ ನಿವೃತ್ತಿ ಪಡೆಯುವುದಾಗಿ ಸಂಸದ ಶಿವಕುಮಾರ್ ಉದಾಸಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಸಂಸದ ಸಂಗಣ್ಣ ಕರಡಿ ಕೂಡಾ ಟಿಕೆಟ್ ಸಿಗದೇ ಇದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಎನ್ನಲಾಗಿದೆ.