Farmers Suicide; ರಾಜ್ಯದಲ್ಲಿ ಹೆಚ್ಚಾಯ್ತು ರೈತರ ಆತ್ಮಹತ್ಯೆ ಪ್ರಕರಣಗಳು; 9 ತಿಂಗಳಲ್ಲಿ 601 ರೈತರ ಆತ್ಮಹತ್ಯೆ!
ಬೆಂಗಳೂರು; ರಾಜ್ಯದಲ್ಲಿ ಐದು ಗ್ಯಾರೆಂಟಿಗಳನ್ನು ಘೋಷಣೆ ಮಾಡಲಾಗಿದೆ. ಆದರೂ ಕೂಡಾ ರೈತರ ಬದುಕು ಹಸನಾಗಿಲ್ಲ. ಈ ಬಾರಿ ಮಳೆ ಸರಿಯಾಗಿ ಆಗದ ಕಾರಣ, ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಕಳೆದ 9 ತಿಂಗಳಲ್ಲಿ ರಾಜ್ಯದಲ್ಲಿ 601 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ರಾಜ್ಯದಲ್ಲಿ ರೈತರು ಎಷ್ಟು ಸಂಕಷ್ಟದಲ್ಲಿದ್ದಾರೆ ಅನ್ನೋದು. 222 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಲಾಗಿದೆ. ಆದ್ರೆ ಬರ ಪರಿಹಾರ ಮಾತ್ರ ಬಂದಿಲ್ಲ. ಕೇಂದ್ರ ಸರ್ಕಾರ ಕೂಡಾ ಬರ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸಾಲ ಮಾಡಿ ಬೆಳೆ ಇಟ್ಟಿದ್ದ ರೈತರು ದಿಕ್ಕುತೋಚದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿಯಲ್ಲಿ 75, ಬೆಳಗಾವಿಯಲ್ಲಿ 73, ಚಿಕ್ಕಮಗಳೂರು ಜಿಲ್ಲೆಯಲ್ಲಿ 60, ಧಾರವಾಡದಲ್ಲಿ 51, ಮೈಸೂರಿನಲ್ಲಿ 42, ಯಾದಗಿರಿಯಲ್ಲಿ 32, ಶಿವಮೊಗ್ಗದಲ್ಲಿ 30, ಬೀದರ್ ನಲ್ಲಿ 29 ಸೇರಿ ಒಟ್ಟು 27 ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
46.09 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ನಷ್ಟ!
ಮಳೆಗಾಲದ ಸಮಯದಲ್ಲಿ 46.09 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ಬೆಳೆಯಲಾಗಿತ್ತು, ಆದ್ರೆ, ಮಳೆ ಸರಿಯಾಗಿ ಆಗದ ಕಾರಣ ಬೆಳೆ ನೆಲಕಚ್ಚಿತ್ತು. ಹಾಕಿದ ಬಂಡವಾಳವೂ ವಾಪಸ್ ಬಂದಿಲ್ಲ. ಇದರಿಂದಾಗಿ ಸಾವಿರಾರು ರೈತರು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಸಾಮಾನ್ಯ ಬೆಳೆ ಅಲ್ಲದೆ, 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಪ್ರದೇಶ ಕೂಡಾ ಮಳೆಯಿಲ್ಲದೆ ಒಣಗಿದೆ. ಇದರಿಂದಲೂ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
35 ಸಾವಿರ ಕೋಟಿ ನಷ್ಟ, ಕೊಟ್ಟಿದ್ದು ಕೇವ 105 ಕೋಟಿ!
ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಇಲಾಖೆ ಮಾಡಿದ ಸರ್ವೇ ಆಧಾರದಲ್ಲಿ ಹೇಳಬೇಕೆಂದರೆ 222 ತಾಲ್ಲೂಕುಗಳು ಬರಪೀಡಿತವಾಗಿವೆ. ಈ ತಾಲ್ಲೂಕುಗಳಲ್ಲಿ ಬೆಳೆದಿದ್ದ ಬೆಳೆಹಾನಿಯಿಂದ ಸುಮಾರು 35,162 ಸಾವಿರ ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ಕೇವಲ 105 ಕೋಟಿ ರೂಪಾಯಿ ಪರಿಹಾರ ಕೊಟ್ಟು ಕೈತೊಳೆದುಕೊಂಡಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳು ಕೂಡಾ ಸರ್ವೇ ಮಾಡಿ ಹೋದರಾದರೂ ಕೇಂದ್ರದಿಂದ ಇದುವರೆಗೂ ಪರಿಹಾರ ಸಿಕ್ಕಿಲ್ಲ.
ಕೇವಲ 2 ಎರಡು ಸಾವಿರ ರೂಪಾಯಿ ಪರಿಹಾರ!
ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಆದ್ರೆ ಸರ್ಕಾರ ಕೊಟ್ಟಿರೋದು ಮಾತ್ರ 105 ಕೋಟಿ ರೂಪಾಯಿ ಪರಿಹಾರ. ಅದೂ ಕೂಡಾ ಒಬ್ಬ ರೈತನಿಗೆ ಗರಿಷ್ಠ 2 ಸಾವಿರ ರೂಪಾಯಿ ಸಿಕ್ಕಿದೆ ಅಷ್ಟೇ. ಆ ಎರಡು ಸಾವಿರ ಪಡೆಯುವುದಕ್ಕಾಗಿ ರೈತ ಅಲೆಯುವುದಕ್ಕೆ ಅಷ್ಟು ಖರ್ಚಾಗಿಬಿಡುತ್ತದೆ.